ಬೆಂಗಳೂರು: ವಿಪಕ್ಷದವರು ಹೇಳಿದ ಪ್ರಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲು ಆಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಾನೂನು ತಜ್ಞರ ಜೊತೆಗೆ ನಾನು ಮಾತನಾಡಿದ್ದೇನೆ. ಈ ಬಾರಿ ಸರಿಯಾಗಿ ಮಳೆ ಇಲ್ಲ. ಕೇವಲ ಬೆಂಗಳೂರಿಗೆ ಮಳೆ ಬಂದಿದೆ. ಕಾವೇರಿ ಬೇಸಿಸ್ಗೆ ಮಳೆ ಬಂದಿಲ್ಲ. ಹೀಗಾಗಿ ವಾಸ್ತವಾಂಶದ ಬಗ್ಗೆ ಎರಡೂ ಕಮಿಟಿಗಳ ಮುಂದೆ ನಮ್ಮ ವಾದ ಮಂಡಿಸಲು ತೀರ್ಮಾನ ಮಾಡಿದ್ದೇವೆ ಎಂದರು.
ಕಾವೇರಿ ವಿಚಾರ ಸಂಬಂಧಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆ ನಡೆದಾಗ 24 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಬೇಕು ಅಂತ ಒತ್ತಾಯ ಮಾಡಿತ್ತು. ಅಷ್ಟು ನೀರು ಬಿಡಲು ಸಾಧ್ಯವಿಲ್ಲ ಅಂತ ವಾದ ಮಾಡಿದೆವು. ಹೀಗಾಗಿ 5 ಸಾವಿರ ಕ್ಯುಸೆಕ್ ಬಿಡಬೇಕು ಅಂತ ಆದೇಶ ಮಾಡಿದರು. ನಾವು 3 ಸಾವಿರ ಕ್ಯುಸೆಕ್ ಬಿಡುತ್ತೇವೆ ಅಂತ ಹೇಳಿದ್ದಾಗಿ ತಿಳಿಸಿದರು.
ಈಗ ನಾವು ಮತ್ತೆ ಕರ್ನಾಟಕದ ಪರಿಸ್ಥಿತಿ ಸುಪ್ರಿಂ ಕೋರ್ಟ್ಗೆ ಮನವರಿಕೆ ಮಾಡಿದ್ದೇವೆ. ನೀರು ಬಿಡಬೇಕಾಗಿದ್ದನ್ನು ಹಿಂದೆ ಬಿಟ್ಟಿದ್ದೇವೆ. ನಮ್ಮ ರೈತರನ್ನು ನಾವು ಕಾಪಾಡಬೇಕು ಎಂದು ಡಿಕೆ ಶಿವಕುಮಾರ್ ಹೇಳಿದರು.
ತಮಿಳುನಾಡಿನವರು ಬೆಳೆಗಳನ್ನು ನಿಯಂತ್ರಿಸುತ್ತಿಲ್ಲ. 93 ಟಿಎಂಸಿ ನೀರು ಈ ಬಾರಿ ತಮಿಳುನಾಡು ಬಳಸಿಕೊಂಡಿದೆ. ಹೆಚ್ಚೆಚ್ಚು ನೀರನ್ನು ತಮಿಳುನಾಡು ಬಳಸಿಕೊಂಡಿದೆ. ಸಂಕಷ್ಟ ಸಮಯದಲ್ಲಿ ಎಷ್ಟು ಕಡಿಮೆ ಬಳಸಿಕೊಳ್ಳಬೇಕಿತ್ತೋ ಅದಕ್ಕಿಂತ ಹೆಚ್ಚು ಬಳಸಿಕೊಂಡಿದ್ದಾರೆ. ಈ ಅಂಶವನ್ನು ನಾವು ಸುಪ್ರೀಮ್ ಕೋರ್ಟಿಗೆ ಮನವರಿಕೆ ಮಾಡಿದ್ದೇವೆ. ವಾಸ್ತವಾಂಶ ಬಂದು ನೋಡಿ ಅಂತ ನಾವು ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.