ನವದೆಹಲಿ : ಕಾವೇರಿ ನೀರು ವಿಚಾರವಾಗಿ ಇಂದು ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆ ನಡೆಯಲಿದೆ. ದೆಹಲಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಸಿಡಬ್ಲ್ಯೂಆರ್ಸಿ ಸಭೆ ನಡೆಯಲಿದ್ದು, ಮುಂದಿನ ಅವಧಿಗೆ ನೀರುಹರಿಸುವ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ.
ಈಗಾಗಲೇ ಪ್ರತಿದಿನ 3000 ಕ್ಯೂ ಸೆಕ್ ನೀರನ್ನು ಕರ್ನಾಟಕ ಹರಿಸುತ್ತಿದೆ. ಅಕ್ಟೋಬರ್ ಅಂತ್ಯದವರಿಗೆ ನೀರು ಹರಿಸಲು ಸಿಡಬ್ಲ್ಯೂಆರ್ಸಿ ಆದೇಶಿಸಿತ್ತು. ಅದರ ಪ್ರಕಾರ ಇದೀಗ ಕರ್ನಾಟಕ ಪ್ರತಿ ದಿನ ಮೂರು ಸಾವಿರ ಕ್ಯೂ ಸೆಕ್ ನಂತೆ ಹದಿನೈದು ದಿನಗಳ ವರೆಗೆ ನೀರು ಹರಿಸುತ್ತಿದೆ.
ಕಳೆದ ಸೆಪ್ಟೆಂಬರ್ 26 ರಂದು ಬೆಂಗಳೂರು ಬಂದ್ ಹಾಗೂ 29ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಹಾಗೂ ರೈತ ಪರ ಸಂಘಟನೆಗಳು ಕರೆ ನೀಡಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಆಗ್ರಹಿಸಿದ್ದವು. ಅದರ ಬಳಿಕವೂ ಕರ್ನಾಟಕಕ್ಕೆ 15 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸುವಂತೆ ಸಿಡಬ್ಲ್ಯೂಆರ್ಸಿ ಆದೇಶಿಸಿದ್ದು ಹೋರಾಟಗಾರರಲ್ಲಿ ಆಕ್ರೋಶ ಹೆಚ್ಚಿಸಿತ್ತು.
ಸಿಡಬ್ಲ್ಯೂಆರ್ಸಿ ಆದೇಶದ ಅವಧಿ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಮಂಡಳಿ ಸಭೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ನೀರು ಹರಿಸಬೇಕಾ ಅಥವಾ ಬೇಡವಾ ಎನ್ನುವ ಕುರಿತು ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.