ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವೀಕರಿಸಿರುವ ಜಾತಿ ಗಣತಿ ವರದಿಯನ್ನು ಶೀಘ್ರ ಸಂಪುಟದ ಮುಂದೆ ತರಲಾಗುವುದು. ಜಾತಿ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪುನರ್ ನಿಗದಿ ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ 5 ನೇ ಜಾಗೃತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ಜಾರಿಯಾಗಿ 74 ವರ್ಷಗಳಾದರೂ ಅಸ್ಪೃಶ್ಯತೆ ಸಂಪೂರ್ಣ ನಿವಾರಣೆಯಾಗಿಲ್ಲ. ಪರಿಶಿಷ್ಟರು ಮೊದಲು ಕೀಳರಿಮೆ ತೊರೆಯಬೇಕು. ಸಂಘಟನೆ ಬಲಗೊಳಿಸಬೇಕು. ಹಕ್ಕುಗಳ ಅನುಷ್ಠಾನ, ನ್ಯಾಯಯುತ ಬೇಡಿಕೆ ಈಡೇರಿಕೆ, ಸಾಮಾಜಿಕ ನ್ಯಾಯ ಅನುಷ್ಠಾನಕ್ಕೆ ಸಂಘಟನೆ ಬಳಕೆಯಾಗಬೇಕು. ಇತರೆ ಸಮುದಾಯಗಳನ್ನು ದ್ವೇಷಿಸಲು, ಅವರ ಹಕ್ಕುಗಳನ್ನು ಕಿತ್ತುಕೊಳ್ಳಲು ಬಳಸಬಾರದು ಎಂದು ಕಿವಿಮಾತು ಹೇಳಿದರು.