Home ಟಾಪ್ ಸುದ್ದಿಗಳು ರಾಜಸ್ಥಾನದಲ್ಲೂ ಜಾತಿ ಗಣತಿ: ರಾಹುಲ್ ಗಾಂಧಿ

ರಾಜಸ್ಥಾನದಲ್ಲೂ ಜಾತಿ ಗಣತಿ: ರಾಹುಲ್ ಗಾಂಧಿ

ಜೈಪುರ: ಕರ್ನಾಟಕದಲ್ಲಿ ಜಾತಿಗಣತಿ ವರದಿ ಮಂಡಿಸಲು ಸಿಎಂ ಸಿದ್ದರಾಮಯ್ಯ ಸಿದ್ಧರಾಗಿರುವಾಗ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರವನ್ನು ಉಳಿಸಿಕೊಂಡರೆ ಜಾತಿ ಗಣತಿ ನಡೆಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ರಾಜಸ್ಥಾನದಲ್ಲಿ ಅಧಿಕಾರವನ್ನು ಉಳಿಸಿಕೊಂಡ ನಂತರ ಕಾಂಗ್ರೆಸ್ ಮಾಡುವ ಮೊದಲ ಕೆಲಸವೆಂದರೆ ಜಾತಿ ಗಣತಿ ಮಾಡುವುದು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇದನ್ನು ರಾಷ್ಟ್ರಮಟ್ಟದಲ್ಲೂ ನಡೆಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಜನರು ತಮ್ಮ ನೈಜ ಸಂಖ್ಯೆಯನ್ನು ತಿಳಿದುಕೊಳ್ಳಬೇಕಾಗಿದೆ. ಇದಕ್ಕೆ ಜಾತಿ ಗಣತಿ ಅಗತ್ಯವಾಗಿದೆ. ಇಂದು ಈ ದೇಶದಲ್ಲಿ ಸಂಪತ್ತು ಹೇಗೆ ಹಂಚಿಕೆಯಾಗುತ್ತಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಒಬಿಸಿ ಎಂದು ಕರೆದುಕೊಳ್ಳುತ್ತಿದ್ದರು. ಆದರೆ ನಾನು ಜಾತಿ ಗಣತಿಗೆ ಒತ್ತಾಯಿಸಿದ ತಕ್ಷಣ ಅವರು ದೇಶದಲ್ಲಿ ಒಂದೇ ಜಾತಿ ಬಡವರು ಎಂದು ಹೇಳಲು ಪ್ರಾರಂಭಿಸಿದ್ದಾರೆ ಎಂದು ರಾಹುಲ್ ಹೇಳಿದರು.

ಧೋಲ್‌ಪುರದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಅಗ್ನಿಪಥ್ ಯೋಜನೆಯನ್ನು ಪರಿಚಯಿಸಿದ್ದಕ್ಕಾಗಿ ಮೋದಿ ಸರ್ಕಾರದ ಮೇಲೆ ಕಟುವಾದ ವಾಗ್ದಾಳಿ ನಡೆಸಿದ ರಾಹುಲ್, ಇದು ರಾಷ್ಟ್ರವನ್ನು ರಕ್ಷಿಸಲು ಬಯಸುವ ಲಕ್ಷಾಂತರ ಯುವಕರ ಕನಸುಗಳನ್ನು ಭಗ್ನಗೊಳಿಸಿದೆ ಎಂದಿದ್ದಾರೆ.

Join Whatsapp
Exit mobile version