ಮಡಿಕೇರಿ: ಮನೆಯವರಿಗೆ ತಿಳಿಸಿ ಮಂಗಳೂರಿನಿಂದ ಮಡಿಕೇರಿಗೆ ಪ್ರವಾಸಕ್ಕೆ ಬಂದಿದ್ದ ತಂಡವೊಂದರ ಮೇಲೆ ಗುಂಪೊಂದು ದಾಳಿ ಮಾಡಿ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂದಾ ಕಿಶನ್, ಸಮನ್ ಫಾಜೀದ್, ಶಂಶೀರ್ ಹಾಗೂ ಯುವತಿಯರು ಒಟ್ಟಿಗೆ ಒಂದೇ ಕಾರಿನಲ್ಲಿ ಮಡಿಕೇರಿಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ದುಷ್ಕರ್ಮಿಗಳು ಗುಂಪು ಕಟ್ಟಿಕೊಂಡು ಬಂದು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದಾರೆ. ಅನ್ಯಕೋಮಿನ ಯುವಕರು ಹಿಂದೂ ಯುವತಿಯೊಂದಿಗೆ ಒಂದೇ ಕಾರಿನಲ್ಲಿ ಬಂದಿರುವುದನ್ನು ವಿರೋಧಿಸಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.
ಅಲ್ಲದೆ ಯುವತಿಯರ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ, ವೈರಲ್ ಮಾಡಲಾಗಿದೆ. ಅದರಲ್ಲಿ “ಮಂಗಳೂರು ನಿಂದ ಮಡಿಕೇರಿಗೆ ಮೋಜು ಮಸ್ತಿ ಮಾಡಲು ಬಂದ, ಎರಡು ಹಿಂದೂ ಹುಡುಗಿಯರು ಮತ್ತು ಮೂವರು ಮುಸ್ಲಿಂ ಹುಡುಗರನ್ನು ಹಿಂದೂ ಜಾಗರಣ ವೇದಿಕೆ ಮಡಿಕೇರಿಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದರು…” ಎಂದು ಉಲ್ಲೇಖಿಸಲಾಗಿತ್ತು.
ನಗರದ ಹೊರವಲಯದ ಮಾಂದಲಪಟ್ಟಿಗೆ ತೆರಳುವ ನಂದಿಮೊಟ್ಟೆ ಜಂಕ್ಷನಲ್ಲಿ ಘಟನೆ ಸಂಭವಿಸಿದೆ.
ಪ್ರವಾಸಿಗರಿದ್ದ ವಾಹನ ತಡೆದು ಅನ್ಯಕೋಮಿನ ಯುವತಿಯರನ್ನು ಕರೆತಂದಿದ್ದಾರೆ ಎಂದು ಹಲವರು ಸೇರಿ ಯುವಕರ ಮೇಲೆ ಗುಂಪು ಹಲ್ಲೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪ್ರವಾಸಿಗರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪ್ರವಾಸಿಗರು ನಾವುಗಳು ಉತ್ತಮ ಸ್ನೇಹಿತರಾಗಿದ್ದು, ಮನೆಯವರ ಅನುಮತಿಯೊಂದಿಗೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ದುಷ್ಕರ್ಮಿಗಳ ವಿರುದ್ಧ ಪೊಲೀಸ್ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ. ಹಲ್ಲೆ ಮಾಡಿದವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಡಿ.ವೈ.ಎಸ್.ಪಿ ಗಜೇಂದ್ರ ಪ್ರಸಾದ್ ತಿಳಿಸಿದ್ದಾರೆ.