ಬಂಟ್ವಾಳ : ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮ ಪಂಚಾಯತ್ ಸದಸ್ಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ಎಚ್. ವಿರುದ್ಧ ಪ್ರಕರಣ ದಾಖಲಾಗಿದೆ.
ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯೆ ಫೌಝಿಯಾ ಅವರು ಪಿಡಿಓ ಲಕ್ಷ್ಮಣ್ ಎಚ್. ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ್ದು, ನ್ಯಾಯಾಲಯದ ಡಿಸ್ ಸಂಖ್ಯೆ 1595/2023 ರಂತೆ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿದೆ.
ಅಕ್ಟೊಬರ್ 21 ರಂದು ಕರೆದಿದ್ದ ಸಾಮಾನ್ಯ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಿ ಮೊಬೈಲ್ ಸಂದೇಶದ ಮೂಲಕ ಮಾಹಿತಿಯನ್ನು ಎಲ್ಲಾ ಪಂಚಾಯಿತಿ ಸದಸ್ಯರಿಗೆ ತಿಳಿಸಿದ್ದಾರೆ. ಆದರೆ ಮತ್ತೆ ಇದೇ ದಿನಾಂಕದಂದು ನಮ್ಮನ್ನೊಳಗೊಂಡ ಸುಮಾರು 8 ಪಂಚಾಯತ್ ಸದಸ್ಯರಿಗೆ ಯಾವುದೇ ಮಾಹಿತಿಯನ್ನು ನೀಡದೆ ಸಾಮಾನ್ಯ ಸಭೆಯನ್ನು ನಡೆಸಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿರುತ್ತಾರೆ. ಇದು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಮಾಡಿದ ಅನ್ಯಾಯವಾಗಿದೆ ಮತ್ತು ಪ್ರಜಾಪ್ರಭುತ್ವ ನಿಯಮಕ್ಕೆ ವಿರುದ್ಧವಾಗಿರುತ್ತದೆ. ಆದ್ದರಿಂದ 8 ಪಂಚಾಯತ್ ಸದಸ್ಯರ ಅನುಪಸ್ಥಿತಿಯಲ್ಲಿ ನಡೆಸಿದ ಸಾಮಾನ್ಯ ಸಭೆಯನ್ನು ಅಮಾನ್ಯಗೊಳಿಸುವ ಮೂಲಕ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ರದ್ದು ಪಡಿಸಬೇಕು ಮತ್ತು ಈ ರೀತಿ ಪಕ್ಷಪಾತ ಧೋರಣೆಯನ್ನು ತೋರ್ಪಡಿಸುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಚ್ ಲಕ್ಷ್ಮಣ್ ರವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ವಜಾಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆದಿತ್ತು.
ಅಕ್ಟೋಬರ್ 30 ರಂದು ಪಂಚಾಯತ್ ಮುಂಭಾಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ಸ್ಥಳಕ್ಕೆ ಬಂದು ಏಕಾಏಕಿ ದರ್ಪವನ್ನು ತೋರಿಸಿ, ಮಹಿಳೆ ಎಂಬುದನ್ನೂ ಲೆಕ್ಕಿಸದೇ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿ ಅಗೌರವ ತೋರಿಸಿದ್ದಾರೆ. ಈ ಕೃತ್ಯ ಎಸಗಿದ ಲಕ್ಷ್ಮಣ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಫೌಝಿಯಾ ದೂರಿನಲ್ಲಿ ತಿಳಿಸಿದ್ದಾರೆ.