ಮಂಗಳೂರು: ಚೆನ್ನೈನ ರಾಷ್ಟ್ರೀಯ ಹಸಿರು ಪೀಠ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸದಂತೆ ದ.ಕ. ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯ ಮರಳುಗಾರಿಕೆಯನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ನೇತ್ರಾವತಿ ಮತ್ತು ಫಲ್ಗುಣಿ ನದಿಗಳ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಗುರುತಿಸಲಾದ 14 ಮರಳು ದಿಬ್ಬಗಳನ್ನು ತೆರವುಗೊಳಿಸಬೇಕು. ಮರಳು ಸಾಗಾಣಿಕೆ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಮರಳು ತೆಗೆಯಲು ಬಳಸುವ ದೋಣಿಗಳು ಮತ್ತು ಮರಳು ಸಾಗಾಟದ ವಾಹನಗಳನ್ನು ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ನಿಷೇಧಿಸುವಂತೆ ರಾಷ್ಟ್ರೀಯ ಹಸಿರು ಪೀಠಕ್ಕೆ ಪರಿಸರವಾದಿ ಗಳು ನೀಡಿದ್ದ ದೂರಿನ ವಿಚಾರಣೆ ನಡೆಸಿದ್ದ ಪೀಠವು ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸಲು ಅನುಸರಿಸುತ್ತಿರುವ ವಿಧಾನಕ್ಕೆ ಅಸಮ್ಮತಿಸಿ ವ್ಯಕ್ತಪಡಿಸಿತ್ತು. ಅಲ್ಲದೆ ತಕ್ಷಣ ಮರಳುಗಾರಿಕೆ ನಿಲ್ಲಿಸಬೇಕು ಮತ್ತು ಈ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯದಂತೆ ನೋಡಿಕೊಳ್ಳಲು 7 ಮಂದಿ ಸದಸ್ಯರ ಸಮಿತಿಗೆ ಮೇ 18ರಂದು ನಿರ್ದೇಶನ ನೀಡಿತ್ತು. ಅದರಂತೆ ದ.ಕ.ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯ ಮರಳುಗಾರಿಕೆಯನ್ನು ಸ್ಥಗಿತಗೊಳಿಸಲು ಆದೇಶಿಸಲಾಗಿದೆ.
ಸರಕಾರದ ಮಾರ್ಗಸೂಚಿಯನ್ವಯ ಜಿಲ್ಲೆಯ ಸಿಆರ್‌ಝಡ್ ಪ್ರದೇಶದಲ್ಲಿ 200 ಸಾಂಪ್ರದಾಯಿಕ ಮರಳು ತೆಗೆಯುವ ವ್ಯಕ್ತಿ/ ಸಮುದಾಯದವರನ್ನು ಗುರುತಿಸಿ ಮರಳು ತೆಗೆಯಲು ಈವರೆಗೆ 148 ತಾತ್ಕಾಲಿಕ ಪರವಾನಗಿಯನ್ನು ನೀಡಲಾಗಿತ್ತು. ಅತಿ ಸೂಕ್ಷ್ಮ ಪ್ರದೇಶವಾಗಿರುವ ಸಿಆರ್‌ಝಡ್‌ನಲ್ಲಿ ಮರಳುಗಾರಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಾಂಪ್ರದಾಯಿಕ ಮೀನುಗಾರರು ಕೂಡ ಈ ಮರಳುಗಾರಿಕೆಯನ್ನು ವಿರೋಧಿಸಿದ್ದರು. ಇದೀಗ ಮರಳುಗಾರಿಕೆ ನಿಲ್ಲಿಸಲು ಹಸಿರು ಪೀಠವೇ ಆದೇಶಿಸಿದ ಕಾರಣ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿವೆ.