Home ಟಾಪ್ ಸುದ್ದಿಗಳು ಸಿದ್ದರಾಮಯ್ಯ ಭೇಟಿ ವೇಳೆ ಬಿಜೆಪಿಗರ ಪುಂಡಾಟಿಕೆ ಪ್ರಕರಣ: ಶಾಸಕ ಕೆ.ಜಿ. ಬೋಪಯ್ಯ ಬಂಧನಕ್ಕೆ ಅರುಣ್ ಮಾಚಯ್ಯ...

ಸಿದ್ದರಾಮಯ್ಯ ಭೇಟಿ ವೇಳೆ ಬಿಜೆಪಿಗರ ಪುಂಡಾಟಿಕೆ ಪ್ರಕರಣ: ಶಾಸಕ ಕೆ.ಜಿ. ಬೋಪಯ್ಯ ಬಂಧನಕ್ಕೆ ಅರುಣ್ ಮಾಚಯ್ಯ ಆಗ್ರಹ

ಮಡಿಕೇರಿ: ಅತಿವೃಷ್ಟಿ ಹಾನಿಪೀಡಿತ ಪ್ರದೇಶಗಳಿಗೆ ಗುರುವಾರದಂದು ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರ ಕಾರಿಗೆ ತಿತಿಮತಿಯಲ್ಲಿ ಬಿಜೆಪಿ ಪಕ್ಷದ ಕಿಡಿಗೇಡಿಗಳು ಪುಂಡಾಟಿಕೆ ನಡೆಸಿದ ಪ್ರಕರಣ ತೀವ್ರ ಖಂಡನೀಯ ಎಂದು ಹೇಳಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಅರುಣ್ ಮಾಚಯ್ಯ, ಇದಕ್ಕೆ ಕುಮ್ಮುಕ್ಕು ನೀಡಿರುವ ಶಾಸಕ ಕೆ. ಜಿ ಬೋಪಯ್ಯ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೆ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅರುಣ್ ಮಾಚಯ್ಯ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಇದನ್ನು ಸಹಿಸದ ಕೋಮುವಾದಿ ಬಿಜೆಪಿ ಪಕ್ಷ ಸಿದ್ದರಾಮಯ್ಯ ಅವರ ಕಾರಿಗೆ ಮಡಿಕೇರಿ ಮತ್ತು ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆದು ತೀರ ಕೆಳಮಟ್ಟದ ರಾಜಕೀಯ ಮಾಡಿದ್ದಾರೆ. ಸಿದ್ದರಾಮಯ್ಯನವರನ್ನು ತಮ್ಮ ಅಭಿವೃದ್ಧಿ ವಿಷಯಾಧಾರಿತ ರಾಜಕಾರಣದಿಂದ ಎದುರಿಸಲಾಗದ ಬಿಜೆಪಿ ತನ್ನ ಗೂಂಡಾಗಿರಿ ಸಂಸ್ಕೃತಿಯನ್ನು ಮತ್ತೊಮ್ಮೆ ರಾಜ್ಯದ ಜನತೆ ಮುಂದೆ ಬಿಂಬಿಸಿದೆ. ಅಲ್ಲದೆ ಗುರುವಾರದ ಘಟನೆಯಲ್ಲಿ ಪೊಲೀಸ್ ಇಲಾಖೆ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.

ಗುರುವಾರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ತಮ್ಮ ಕ್ರಿಮಿನಲ್ ಹಿನ್ನೆಲೆಯ ಕಾರ್ಯಕರ್ತರನ್ನು ಬೀದಿಗೆ ಇಳಿಸಿ ಸಿದ್ದರಾಮಯ್ಯ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲು ಮೊಟ್ಟೆ ಕೊಟ್ಟು ಕಳಿಸಿದ್ದು ಬಿಜೆಪಿಯ ಹೀನಾ ಸಂಸ್ಕೃತಿಯನ್ನು ತೋರಿಸುತ್ತದೆ. ಬಿಜೆಪಿ ಇದೀಗ ಕೊಡಗಿನಲ್ಲಿ ಕ್ರಿಮಿನಲ್ ಹಿನ್ನೆಲೆಯ ಮರೀ ರೌಡಿಗಳನ್ನು ಉತ್ಪಾದಿಸುವ ಪಕ್ಷವಾಗುತ್ತಿದೆ ಎಂದು ಆರೋಪಿಸಿರುವ ಅರುಣ್ ಮಾಚಯ್ಯ, ಬಿಜೆಪಿಯ ಮುಖ್ಯಮಂತ್ರಿ ಅಥವಾ ಸಚಿವರು ಜಿಲ್ಲೆಗೆ ಆಗಮಿಸುವ ಸಂದರ್ಭದಲ್ಲಿ ಕಾಂಗ್ರೆಸ್ಸಿಗರಿಗೂ ಅವರ ಕಾರಿಗೆ ಮೊಟ್ಟೆ ಎಸೆಯುವುದು ದೊಡ್ಡ ಕಷ್ಟದ ಕೆಲಸವೇನಲ್ಲ. ಆದರೆ ಅದು ರಾಜಕಾರಣದಲ್ಲಿ ಶೋಭೆಯಲ್ಲ. ಬಿಜೆಪಿಯವರು ಗೂಂಡಾಗಿರಿ ರಾಜಕಾರಣವನ್ನು ಮತ್ತೆ ಮುಂದುವರಿಸಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ತಿತಿಮತಿ ಮತ್ತು ಮಡಿಕೇರಿಯಲ್ಲಿ ಬಿಜೆಪಿಯ ಕಾರ್ಯಕರ್ತರು ನಡೆಸಿದ ಕಿಡಿಗೇಡಿ ಕೃತ್ಯಗಳಿಗೆ ಶಾಸಕ ಕೆ. ಜಿ. ಬೋಪಯ್ಯ ಅವರ ಕುಮ್ಮುಕು ಇರುವುದು ಸ್ಪಷ್ಟವಾಗಿದೆ. 4 ಬಾರಿ ಶಾಸಕರಾಗಿರುವ ಬೋಪಯ್ಯ ಅವರಿಗೆ ಇದು ಗೌರವ ತರುವುದಿಲ್ಲ. ಕೊಡಗಿನ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರಿಂದ ಸಿದ್ದರಾಮಯ್ಯನವರ ಘನತೆಯನ್ನು ಕುಂದಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಹೇಳಿರುವ ಅರುಣ್ ಮಾಚಯ್ಯ, ಹತಾಶೆಗೊಳಗಾಗಿರುವ ಶಾಸಕ ಕೆ. ಜಿ. ಬೋಪಯ್ಯ ತಮ್ಮ ಅಸಂವಿಧಾನಿಕ ರಾಜಕಾರಣವನ್ನು ತಕ್ಷಣ ನಿಲ್ಲಿಸಬೇಕು. ತಮ್ಮ ಜೊತೆಗಿರುವ ಮರಿ ಪುಡಾರಿಗಳನ್ನು ನಿಯಂತ್ರಿಸಿಕೊಳ್ಳಬೇಕು. ತಪ್ಪಿದಲ್ಲಿ ಕೆ.ಜಿ. ಬೋಪಯ್ಯ ಅವರ ಕಾರಿಗೂ ಕಪ್ಪು ಬಾವುಟ ಪ್ರದೇಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರು ಸಂಚರಿಸಿದ ಮಾರ್ಗದಲ್ಲಿ ಕಿಡಿಗೇಡಿ ಕೃತ್ಯ ನಡೆಸಿದ ಬಿಜೆಪಿಯ ಎಲ್ಲಾ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕು. ಅಲ್ಲದೆ ಈ ಕೃತ್ಯದಲ್ಲಿ ಪಾಲ್ಗೊಂಡವರನ್ನು ರೌಡಿ ಶೀಟ್ ಪಟ್ಟಿಗೆ ಸೇರಿಸಬೇಕು. ಅಲ್ಲದೆ ಕರ್ತವ್ಯ ಲೋಪವೆಸಗಿರುವ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿರುವ ಅರುಣ್ ಮಾಚಯ್ಯ, ಜಿಲ್ಲೆಯ ರಾಜಕೀಯ ಇತಿಹಾಸಕ್ಕೆ ಕಪ್ಪು ಚುಕ್ಕೆ ಎಸೆಗಿರುವ ಬಿಜೆಪಿ ಪಕ್ಷಕ್ಕೆ ಜನತೆ ಮುಂದೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದ್ದಾರೆ.

Join Whatsapp
Exit mobile version