Home ಟಾಪ್ ಸುದ್ದಿಗಳು ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣ| ನಟ ವಿವೇಕ್ ಹಾಗೂ ಮಹೇಶ್ ವಿರುದ್ಧ ಪ್ರಕರಣ ದಾಖಲು

ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣ| ನಟ ವಿವೇಕ್ ಹಾಗೂ ಮಹೇಶ್ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ವಿವೇಕ್ ಹಾಗೂ ಮಹೇಶ್ ವಿರುದ್ದ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡದ ನಟಿ ಸವಿ ಮಾದಪ್ಪ ಗುರುವಾರ ಬೆಂಗಳೂರು ದಕ್ಷಿಣ ತಾಲ್ಲೂಕಿನ ದೊಡ್ಡಬೆಳೆ ಎಂಬಲ್ಲಿ ಅಪಾರ್ಟ್‌ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ತಂದೆ ಪ್ರಭು ಮಾದಪ್ಪ ನೀಡಿದ ದೂರಿನ ಆಧಾರದ ಮೇಲೆ ಕುಂಬಳಗೋಡು ಪೊಲೀಸರು ಐಪಿಸಿ ಸೆಕ್ಷನ್ 306ರ (ಆತ್ಮಹತ್ಯೆಗೆ ಕುಮ್ಮಕ್ಕು) ಅಡಿಯಲ್ಲಿ ವಿವೇಕ್  ಹಾಗೂ ಮಹೇಶ್ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.

ನನ್ನ ಮಗಳ ಸಾವಿಗೆ ನಟ ವಿವೇಕ್ ಹಾಗೂ ಮಹೇಶ್ ಕಿರುಕುಳವೇ ಕಾರಣವಾಗಿದೆ. ನನ್ನ ಮಗಳು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸುವ ಸಲುವಾಗಿ 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದಳು. ಒಂದು ವರ್ಷದ ಹಿಂದೆ ಕುಂಬಳಗೋಡು ಬಳಿಯ ಸನ್ವರ್ಥ್ ಅಪಾರ್ಟ್‍ಮೆಂಟ್​ನಲ್ಲಿ ವಾಸವಾಗಿದ್ದಳು.

ಈ ವೇಳೆ ನನ್ನ ಮಗಳು ಸೌಜನ್ಯಾಳಿಗೆ ವಿವೇಕ್ ಎಂಬಾತನ ಪರಿಚಯವಾಗಿದ್ದು ಆತ ನನ್ನ ಮಗಳನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದು ಪೀಡಿಸುತ್ತಿದ್ದ. ಈ ವಿಚಾರವನ್ನು ಮಗಳು ಸೌಜನ್ಯ, ನನ್ನ ಪತ್ನಿ ರೇಣುಕಾಳಿಗೆ ತಿಳಿಸಿದ್ದಳು.

ಕಳೆದ ಸೆಪ್ಟೆಂಬರ್ 30ರಂದು ವಿವೇಕ್ ನನ್ನ ಪತ್ನಿ ರೇಣುಕಾಗೆ ಬೆಳಗ್ಗೆ 9ಕ್ಕೆ ಕರೆ ಮಾಡಿ, ನಿನ್ನ ಮಗಳು ನನ್ನನ್ನು ಮದುವೆಯಾಗದಿದ್ದರೆ ಅವಳನ್ನ ಹೊಡೆದು ಸಾಯಿಸುತ್ತೇನೆಂದು ಬೆದರಿಕೆ ಹಾಕಿದ್ದ. ಇದಾದ ಒಂದು ಗಂಟೆ ನಂತರ ನನ್ನ ದೊಡ್ಡ ಮಗಳು ಭಾಗ್ಯಶ್ರೀ ಕರೆಮಾಡಿ, ಸವಿ ಸತ್ತು ಹೋಗಿದ್ದಾಳೆ ಎಂದು ತಿಳಿಸಿದಳು. ನನ್ನ ಮಗಳ ಸಾವಿಗೆ ವಿವೇಕ್ ಹಾಗೂ ಅವಳ ಸಹಾಯಕನಾಗಿದ್ದ ಮಹೇಶ್ ಕಾರಣವಾಗಿದ್ದಾನೆ.

ನನ್ನ ಮಗಳ ಬಳಿ 6 ಲಕ್ಷ ಹಣವಿತ್ತು. ಎರಡು ದಿನಗಳ ಹಿಂದೆ 1 ಲಕ್ಷ ಹಣವನ್ನು ಕಳುಹಿಸಿದ್ದೆ. ನನ್ನ ಮಗಳು ಜೊತೆಯಲ್ಲಿದ್ದ ಮಹೇಶ್ ಹಾಗೂ ವಿವೇಕ್ ಕಿರುಕುಳ ತಾಳಲಾರದೆ ಬೆಳಿಗ್ಗೆ 10:30ರ ಸುಮಾರಿಗೆ ಸೀಲಿಂಗ್ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹೀಗಾಗಿ, ವಿವೇಕ್ ಹಾಗೂ ಮಹೇಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಟಿಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗಗನ ಸಖಿಯಾಗಿ ಕೆಲಸ ಮಾಡಿದ್ದ ಸೌಜನ್ಯ, ಚೌಕಟ್ಟು,ಅರ್ಜುನ್ ಗೌಡ, ಫನ್ ಸೇರಿದಂತೆ ಮೂರು ಚಿತ್ರಗಳಲ್ಲಿ ನಟಿಸಿದ್ದು‌ ಆಕೆಯ ಅಂತ್ಯಕ್ರಿಯೆ ಕುಶಾಲನಗರ ತಾಲೂಕಿನ ಶುಂಠಿಕೊಪ್ಪದ ಅಂದಗೋವೆ ಗ್ರಾಮದಲ್ಲಿ ನೇರವೇರಿದೆ.

Join Whatsapp
Exit mobile version