ಕೊಪ್ಪಳ: ಮಹಿಳೆಯೊಬ್ಬರಿಗೆ ಕೊಲೆ ಬೆದರಿಕೆ ಒಡ್ಡಿರುವ ಆರೋಪದ ಮೇಲೆ ಕೊಪ್ಪಳ ಜಿಲ್ಲೆಯ ಕೊಟ್ಟೂರು ಸ್ವಾಮೀಜಿ ವಿರುದ್ಧ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಕಲ್ಮಠದ ಕೊಟ್ಟೂರು ಸ್ವಾಮೀಜಿ ಹಾಗೂ ಬಸಲಿಂಗಮ್ಮ ವಿರುದ್ಧ ಮಹಿಳೆ ಕಮಲಾಕ್ಷಿ ದೂರು ನೀಡಿದ್ದು ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಕೊಟ್ಟೂರೇಶ್ವರ ಕಾಲೇಜಿನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಕಮಲಾಕ್ಷಿಗೆ ಬಸಲಿಂಗಮ್ಮ, ನೀನು ಯಾಕೆ ಇಲ್ಲಿ ಬಂದಿದ್ದೀಯ ಎಂದು ನಿಂದಿಸಿ, ಗಲಾಟೆ ಪ್ರಾರಂಭಿಸಿದ್ದಳು. ಸ್ವಾಮೀಜಿ ಬಳಿ ಪಿಸ್ತೂಲ್ ಇದೆ, ನಿನ್ನ ಕೊಲೆ ಮಾಡಿಸುತ್ತೇನೆ ಎಂದು ಬಸಲಿಂಗಮ್ಮ ಬೆದರಿಕೆ ಹಾಕಿರುವುದಾಗಿ ಕಮಲಾಕ್ಷಿ ದೂರಿನಲ್ಲಿ ನಮೂದಿಸಿದ್ದಾರೆ.
ಇದೇ ವೇಳೆ ಗೇಟ್ ಬಳಿ ಇದ್ದ ಕೊಟ್ಟೂರು ಸ್ವಾಮೀಜಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕಮಲಾಕ್ಷಿ ದೂರು ನೀಡಿದ್ದು, ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಕೊಟ್ಟೂರು ಸ್ವಾಮೀಜಿ ಹಾಗೂ ಬಸಲಿಂಗಮ್ಮ ವಿರುದ್ಧ ಕಲಂ 323, 324, 504 ಹಾಗೂ 506 ಅಡಿಯಲ್ಲಿ ದೂರು ದಾಖಲಾಗಿದೆ.