ಉತ್ತರ ಪ್ರದೇಶ: ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾರ ಭಾನುವಾರ ಭೇಟಿ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ಕು ರೈತರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಕಾರುಗಳು ರೈತರ ಮೇಲೆ ಹರಿದು ಹೋದ ಸಂದರ್ಭದಲ್ಲಿ ಕಾರಿನಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರನೂ ಇದ್ದ ಎಂದು ಹೇಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವರ ಪುತ್ರ ಆಶೀಶ್ ವಿರುದ್ದ ಕೊಲೆ ಪ್ರಕರಣ ದಾಖಲಾಗಿದೆ.
ಸಚಿವ ಅಜಯ್ ಮಿಶ್ರಾರ ಮಗ ಆಶೀಶ್ ವಿರುದ್ದ ಮಾತ್ರವಲ್ಲದೆ ಇನ್ನೂ ಕೂಡಾ ಹಲವು ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದೆ. ಎಫ್‌ಐಆರ್‌ನಲ್ಲಿ ಹಲವಾರು ಮಂದಿಯ ಹೆಸರನ್ನು ಉಲ್ಲೇಖ ಮಾಡಲಾಗಿದೆ.
ನಾವು ಸಚಿವರುಗಳ ಭೇಟಿಯನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಭಟನೆ ನಡೆಸಿ ಹಿಂದಕ್ಕೆ ತೆರಳುವ ವೇಳೆ ಕಾರುಗಳನ್ನು ರೈತರ ಮೇಲೆಯೇ ಹರಿಸಲಾಗಿದೆ, ಈ ಸಂದರ್ಭ ಕಾರಿನಲ್ಲಿ ಸಚಿವರ ಮಗನೂ ಇದ್ದ, ಎಂದು ರೈತ ಮುಖಂಡ ಡಾ. ದರ್ಶನ್ ಪಾಲ್ ಆರೋಪಿಸಿದ್ದಾರೆ. ಒಟ್ಟು ಮೂರು ಕಾರುಗಳು ಬಂದಿದೆ. ರೈತರುಗಳನ್ನು ತಳ್ಳಿಕೊಂಡು ರೈತರ ಮೇಲೆಯೇ ಆ ಕಾರುಗಳು ಸಾಗಿದ್ದು, ಈ ವೇಳೆ ಓರ್ವ ರೈತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.