ಮುಂಬೈ: ಇಲ್ಲಿನ ಬಾಂದ್ರಾ ವರ್ಲಿ ಸಮುದ್ರ ಸಂಪರ್ಕ ಸೇತುವೆಯ ಅಂಚಿನಲ್ಲಿ ನಿಂತು ಅಪಾಯಕಾರಿ ಸಾಹಸ ಮಾಡಿದ್ದ ಬಾಲಿವುಡ್ ಗಾಯಕ, ಗೀತರಚನೆಕಾರ ಯಾಸರ್ ದೇಸಾಯಿ ಮತ್ತು ಇತರ ಇಬ್ಬರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯಾಸರ್ ಅವರು ರಭಸವಾಗಿ ಬೀಸುತ್ತಿದ್ದ ಗಾಳಿಯ ನಡುವೆ ಸಮುದ್ರ ಸೇತುವೆಯ ಅಂಚಿನಲ್ಲಿ ನಿಂತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
‘ನೋಡುಗರೊಬ್ಬರು ಯಾಸರ್ ಸೇತುವೆ ಮೇಲೆ ನಿಂತಿರುವುದನ್ನು ಹಾಗೂ ಅವರ ಜೊತೆಗಿದ್ದ ಇಬ್ಬರು ಕೆಳಕ್ಕೆ ನಿಂತು ಚಿತ್ರೀಕರಿಸುತ್ತಿದ್ದ ಬಗ್ಗೆ ಹಾಗೂ ನಂತರ ಕಾರನ್ನು ಹತ್ತಿ ತೆರಳಿದ್ದರ ಕುರಿತು ಮಾಹಿತಿ ನೀಡಿದ್ದರು. ಅವರ ಸಾಹಸದ ದೃಶ್ಯವನ್ನು ನೋಡುಗರು ವಿಡಿಯೊ ಮಾಡಿ ನಮಗೆ ಕಳುಹಿಸಿದ್ದರು, ವಿಡಿಯೊದಲ್ಲಿದ್ದ ದೃಶ್ಯ ಆಧರಿಸಿ ಕಾರು ಯಾರದ್ದೆಂದು ಪತ್ತೆಹಚ್ಚಲಾಯಿತು. ತನಿಖೆ ವೇಳೆ ಸೇತುವೆ ಮೇಲೆ ನಿಂತವರು ಯಾಸರ್ ದೇಸಾಯಿ ಎಂದು ತಿಳಿದು ಬಂದಿದೆ’ ಎಂದು ಪೊಲೀಸರು ವಿವರಿಸಿದ್ದಾರೆ.