ಬೆಂಗಳೂರು: ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಆನೇಕಲ್ನ ಸೋಲೂರು ಗೇಟ್ ಬಳಿ ನಡೆದಿದೆ.
ಹೊಂಗಸಂದ್ರದ ಶಶಿಧರ್(31), ಕುಣಿಗಲ್ ಮೂಲದ ಭೈರೇಶ್ (34) ಮೃತಪಟ್ಟವರು.
ಗಾಯಗೊಂಡಿರುವ ರಾಹುಲ್, ಮಿಥುನ್ ಹಾಗೂ ತಿಪ್ಪೇಶ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮೂವರು ಸ್ಥಿತಿ
ಚಿಂತಾಜನಕವಾಗಿದೆ. ಮೃತ ಇಬ್ಬರು ಗಾಯಗೊಂಡಿರುವ ಮೂವರೂ ಕೂಡ್ಲು ಬಳಿಯ ಗಾರ್ಮೆಂಟ್ಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದು ಐವರು ಕಾರಿನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಶಶಿಧರ್ ಹಾಗೂ ಭೈರೇಶ್ ಮೃತಪಟ್ಟರೆ, ಹಿಂಬದಿ ಸೀಟಿನಲ್ಲಿ ಕುಳಿತಿದ್ದ ರಾಹುಲ್, ಮಿಥುನ್, ತಿಪ್ಪೇಶ್ ಗಂಭೀರವಾಗಿ ಗಾಯಗೊಂಡರು.
ಘಟನಾ ಸ್ಥಳಕ್ಕೆ ಸುದ್ದಿ ತಿಳಿದ ತಕ್ಷಣವೇ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ
ರಸ್ತೆಗೆ ಅಂಟಿಕೊಂಡಿದ್ದ ಮರ ತೆಗೆಯದೇ ವಲಯ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರಸ್ತೆ ಅಗಲೀಕರಣ ಮಾಡಿದ್ದರೂ ಸಹ ಮರ ತೆರವು ಮಾಡಿರಲಿಲ್ಲ. ಹೀಗಾಗಿ, ಅಪಘಾತ ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.