ರಾಂಚಿ: ದೀಪಾವಳಿ ಹಿನ್ನೆಲೆಯಲ್ಲಿ ಹಚ್ಚಿಟ್ಟಿದ್ದ ಕ್ಯಾಂಡಲ್ ನಿಂದ ಬಸ್ ಗೆ ಬೆಂಕಿ ತಗುಲಿ ಅದರಲ್ಲಿದ್ದ ಇಬ್ಬರು ಸಜೀವದಹನಗೊಂಡ ಘಟನೆ ಮಂಗಳವಾರ ಜಾರ್ಖಂಡ್ ನ ರಾಂಚಿಯಲ್ಲಿ ನಡೆದಿದೆ.
ಲೋವರ್ ಬಜಾರ್ ಪೊಲೀಸ್ ಠಾಣೆ ಪ್ರದೇಶದ ಖಡ್ಗ್ ಗರ್ಹಾ ದಲ್ಲಿರುವ ರಾಜ್ಯದ ಅತ್ಯಂತ ಜನನಿಬಿಡ ಟರ್ಮಿನಲ್ ನಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ.
ದೀಪಾವಳಿಯ ಹಿನ್ನೆಲೆಯಲ್ಲಿ ಬಸ್ ನಲ್ಲಿ ಮೇಣದ ಬತ್ತಿ ಹೊತ್ತಿಸಿ ಇಡಲಾಗಿತ್ತು. ದುರಂತಕ್ಕೆ ಇದೇ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೃತರನ್ನು ಬಸ್ಸಿನ ಚಾಲಕ ಮದನ್ ಮಹತೋ (50) ಮತ್ತು ಕ್ಲೀನರ್ ಇಬ್ರಾಹೀಂ (25) ಎಂದು ಗುರುತಿಸಲಾಗಿದೆ.
ಮಹತೋ ಗುಮ್ಲಾ ಜಿಲ್ಲೆಯ ನಿವಾಸಿಯಾಗಿದ್ದು, ಇಬ್ರಾಹಿಂ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಚೈಬಾಸಾ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ ಮತ್ತು ಸಹಾಯಕರು ಬಸ್ಸಿನಲ್ಲಿ ಮಲಗಿದ್ದಾಗ ಮಧ್ಯರಾತ್ರಿ ಈ ಘಟನೆ ನಡೆದಿದೆ. ದೀಪಾವಳಿ ಹಿನ್ನೆಲೆಯಲ್ಲಿ ಅವರು ಬಸ್ ನ ಡ್ಯಾಶ್ ಬೋರ್ಡ್ ನಲ್ಲಿ ಮೇಣದ ಬತ್ತಿಗಳನ್ನು ಬೆಳಗಿಸಿ ಇಟ್ಟಿದ್ದರು. ನಿದ್ರೆಯ ಮಂಪರಿನಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಅವರಿಗೆ ತಿಳಿದಿಲ್ಲ. ಪರಿಣಾಮ ಇಡೀ ಬಸ್ಸಿಗೆ ಬೆಂಕಿ ಹೊತ್ತಿಕೊಂಡು ಅವರು ಸಜೀವದಹನಗೊಂಡಿದ್ದಾರೆ ಎಂದು ಖಡ್ಗರಾದ ಠಾಣಾ ಹೊರಠಾಣೆಯ ಉಸ್ತುವಾರಿ ವಿಕಾಸ್ ಆರ್ಯನ್ ತಿಳಿಸಿದ್ದಾರೆ.