Home ಟಾಪ್ ಸುದ್ದಿಗಳು ಕೇಂದ್ರೀಯ ವಿದ್ಯಾಲಯ ಪ್ರವೇಶಕ್ಕೆ ಸಂಸದರ ಕೋಟಾ ರದ್ದು

ಕೇಂದ್ರೀಯ ವಿದ್ಯಾಲಯ ಪ್ರವೇಶಕ್ಕೆ ಸಂಸದರ ಕೋಟಾ ರದ್ದು

ನವದೆಹಲಿ: ಕೇಂದ್ರೀಯ ವಿದ್ಯಾಲಯಗಳಿಗೆ ಲೋಕ ಸಭಾ ಸದಸ್ಯರ ಕೋಟಾದಿಂದ ಪ್ರವೇಶ ಪಡೆಯಲು ಇದ್ದ ನಿಯಮವನ್ನು ಒಕ್ಕೂಟ ಸರ್ಕಾರ ತೆಗೆದು ಹಾಕಿದೆ.

ಭಾರತದೆಲ್ಲೆಡೆ 1,248 ಕೇಂದ್ರೀಯ ವಿದ್ಯಾಲಯಗಳಿದ್ದು, ಅದರಲ್ಲಿ 14,35,562 ವಿದ್ಯಾರ್ಥಿಗಳು ಕಲಿಯಲು ಪ್ರವೇಶ ಪಡೆಯುತ್ತಾರೆ.

ಈಗ ಒಕ್ಕೂಟ ಸರಕಾರವು ಕೇಂದ್ರೀಯ ವಿದ್ಯಾಲಯಗಳಿಗೆ ಲೋಕ ಸಭಾ ಸಂಸದರ ಕೋಟಾದಿಂದ ಪ್ರವೇಶ ಪಡೆಯಲು ಇದ್ದ ನಿಯಮವನ್ನು ಕಿತ್ತು ಹಾಕಿದೆ. 2022- 23ರ ಕೇಂದ್ರೀಯ ವಿದ್ಯಾಲಯ ಪ್ರವೇಶಾತಿ ಮಾರ್ಗದರ್ಶಿ ಸೂತ್ರ ಪ್ರಕಟಿಸಲಾಗಿದ್ದು, ಸಂಸದರ ಕೋಟಾಕ್ಕೆ ಕತ್ತರಿ ಹಾಕಲಾಗಿದೆ.

ಅದೇ ರೀತಿ ಮಂತ್ರಾಲಯಗಳ ನೌಕರರ ಮಕ್ಕಳು, ಸಂಸದರ ಅವಲಂಬಿತರ ಮಕ್ಕಳು, ಹಾಲಿ ಇಲ್ಲವೇ ಮಾಜೀ ಕೇಂದ್ರೀಯ ವಿದ್ಯಾಲಯಗಳ ನೌಕರರ ಮಕ್ಕಳು, ಶಾಲಾ ನಿರ್ವಹಣಾ ಸಮಿತಿಯ ಚೇರ್ಮನ್ ಇವರೆಲ್ಲರ ವಿವೇಚನಾ ಕೋಟಾದಡಿ ನೀಡುವ ಪ್ರವೇಶವನ್ನು ರದ್ದು ಪಡಿಸಲಾಗಿದೆ.

ಶಿಕ್ಷಣ ಇಲಾಖೆಯಡಿ ಸ್ವಾಯುತ್ತ ಸಂಸ್ಥೆಯಾದ ಕೇಂದ್ರೀಯ ವಿದ್ಯಾಲಯ ಸಂಘಟನೆಯು ಈ ಶಾಲೆಗಳನ್ನು ನಡೆಸುತ್ತದೆ. ಹೊಸ ನಿಯಮದಂತೆ ಪ್ರವೇಶಾತಿಗೆ ಹೊಸ ನೀತಿಗಳನ್ನು ರೂಪಿಸಲಾಗಿದೆ.

ಲೋಕ ಸಭಾ ಸದಸ್ಯರು ಕೇಂದ್ರೀಯ ವಿದ್ಯಾಲಯದ 1ರಿಂದ 9ನೇ ತರಗತಿಯವರೆಗೆ 10 ವಿದ್ಯಾರ್ಥಿಗಳ ಹೆಸರನ್ನು ಶಿಫಾರಸು ಮಾಡಬಹುದು. ಆ ವಿದ್ಯಾರ್ಥಿಗಳ ಪೋಷಕರು ಅವರ ಲೋಕ ಸಭಾ ಕ್ಷೇತ್ರಕ್ಕೆ ಸೇರಿದವರಾಗಿರಬೇಕು.

543 ಲೋಕ ಸಭಾ ಮತ್ತು 245 ರಾಜ್ಯ ಸಭಾ ಸದಸ್ಯರು ಸೇರಿ ಒಟ್ಟು 7,880 ವಿದ್ಯಾರ್ಥಿಗಳ ಪ್ರವೇಶಾತಿಗೆ ಶಿಫಾರಸು ಮಾಡಬಹುದು. ಈ ಕೋಟಾವನ್ನು 1975ರಲ್ಲಿ ಪರಿಚಯಿಸಲಾಗಿತ್ತು. ಇದನ್ನು ಹಿಂದೆಯೂ ಎರಡು ಬಾರಿ ರದ್ದು ಮಾಡಿ ಮತ್ತೆ ಆರಂಭಿಸಲಾಗಿತ್ತು.

2018- 19ರ ಮಾಹಿತಿಯಂತೆ ಸಂಸದರ ಕೋಟಾದಡಿ 7,301 ವಿದ್ಯಾರ್ಥಿಗಳು ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿದ್ದರು. 2021- 22ರಲ್ಲಿ ಈ ಕೋಟಾದಡಿ ಪ್ರವೇಶಾತಿ ಮತ್ತೆ ಏರಿತು.

ಸದರಿ ಸಂಸದರ ಕೋಟಾದಲ್ಲಿ ಪ್ರವೇಶಾತಿಯಂತೆ ಹಿಂದೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನಿಲ್ಲಿಸಿದ್ದರು. ಮತ್ತೆ ಆರಂಭಿಸಿದಾಗ 2019- 20ರಲ್ಲಿ 9,411 ಮತ್ತು 2020- 21ರಲ್ಲಿ 12,295 ವಿದ್ಯಾರ್ಥಿಗಳು ಸಂಸದರ ಕೋಟಾದಡಿ ಪ್ರವೇಶ ಪಡೆದರು.

ಪರಮ ವೀರ ಚಕ್ರ, ಮಹಾ ವೀರ ಚಕ್ರ, ವೀರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರ ವಿಜೇತರ ಮಕ್ಕಳು, ರಾಷ್ಟ್ರೀಯ ಶೌರ್ಯ ಪ್ರಶಸ್ತಿ, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ-ರಾ ಸಿಬ್ಬಂದಿಯ 15 ಮಕ್ಕಳಿಗೆ, ಕೇಂದ್ರ ಸರಕಾರದ ಸಿಬ್ಬಂದಿಯ ಮಕ್ಕಳಿಗೆ, ಕೆಲಸದ ವೇಳೆ ಸಾಯುವವರ ಮಕ್ಕಳು, ಕೋವಿಡ್ ನಲ್ಲಿ ಅನಾಥರಾದ ಮಕ್ಕಳು, ಕಲಾ ಲೋಕದಲ್ಲಿ ವಿಶೇಷ ಪ್ರತಿಭೆ ತೋರುವ ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಆದ್ಯತೆಯ ಮೇಲೆ ಪ್ರವೇಶ ದೊರೆಯುತ್ತದೆ.

ತರಗತಿಗಳ ಸ್ಥಾನ ಬಾಹುಳ್ಯ ಗಮನಿಸಿ ಆದ್ಯತೆಯ ಮೇಲೆ ಪ್ರವೇಶಾತಿ ನೀಡಲಾಗುತ್ತದೆ.

Join Whatsapp
Exit mobile version