ಮಂಗಳೂರು: ಹಿಂದುಳಿದ ವರ್ಗಗಳ 2ಬಿ ಅಡಿಯಲ್ಲಿ ಮುಸ್ಲಿಮರಿಗೆ ನೀಡುತ್ತಿದ್ದ ಶೇ 4% ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಲಿಂಗಾಯುತ ಮತ್ತು ಒಕ್ಕಲಿಗರಿಗೆ ಹಂಚಿಕೆ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿಯ ಸಾವಿರ ಜಮಾಅತ್ ಅಧ್ಯಕ್ಷರಾದ ಬಿ.ಜಿ. ಹನೀಫ್ ಹಾಜಿ ತೀವ್ರವಾಗಿ ಖಂಡಿಸಿದ್ದು, ಇದರ ವಿರುದ್ಧ ಬೃಹತ್ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ಮುಸ್ಲಿಮರಿಗೆ 2B ಅಡಿಯಲ್ಲಿ ನೀಡುತ್ತಿದ್ದ ಮೀಸಲಾತಿಯನ್ನು ಕೈಬಿಟ್ಟಿರುವ ನಿರ್ದಾರವನ್ನು ಹಿಂಪಡೆಯಲು ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಶೈಕ್ಷಣಿಕವಾಗಿಯೂ, ಸಾಮಾಜಿಕವಾಗಿಯೂ ಹಿಂದುಳಿದಿರುವ ಮುಸ್ಲಿಮರಿಗೆ 2ಬಿ ಅಡಿಯಲ್ಲಿ ನೀಡುತ್ತಿದ್ದ ಶೇ 4% ಮೀಸಲಾತಿ ರದ್ದತಿಯೂ ಮುಸ್ಲಿಮರನ್ನು ಶೈಕ್ಷಣಿಕವಾಗಿ ಇನ್ನಷ್ಟು ಹಿಂದೆ ತಳ್ಳಲು ಕಾರಣವಾಗುವ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
1979ರ ಏಪ್ರಿಲ್ 9ರ ಕರ್ನಾಟಕ ಹೈಕೋರ್ಟ್ ತೀರ್ಪಿನಲ್ಲಿ “ಮುಸ್ಲಿಮರು ಧಾರ್ಮಿಕ ಅಲ್ಪಸಂಖ್ಯಾತರು ಎಂಬುದು ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆಯಲು ಕಾರಣವಾಗವುದಿಲ್ಲ” ಎಂದು ಸ್ಪಷ್ಟವಾಗಿ ಆದೇಶಿಸಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಉಳ್ಳಾಲ ದರ್ಗಾ ಸಮಿತಿ ಸಾವಿರ ಜಮಾಅತ್’ನ ಮೊಹಲ್ಲಾ ಪದಾಧಿಕಾರಿಗಳ ಜತೆ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ಹಾಗೂ ಕಾನೂನು ಹೋರಾಟದ ಬಗ್ಗೆ ರೂಪುರೇಷೆ ಕೈಗೊಳ್ಳಲಾಗುವುದು ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.