ಬೆಂಗಳೂರು: ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶೇ. 25 ಮೀಸಲಾತಿ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸಂವಿಧಾನದ 30ನೇ ವಿಧಿಯ ಸ್ಪಷ್ಟ ಉಲ್ಲಂಘನೆ. ಇದರಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.
ಭಾರತದ ಸಂವಿಧಾನದಲ್ಲಿ 30ನೇ ವಿಧಿಯ ಮೂಲಕ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಶಿಕ್ಷಣವನ್ನು ಉತ್ತೇಜಿಸಲು ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡುವ ಮತ್ತು ನಿರ್ವಹಿಸಿಕೊಂಡು ಹೋಗುವ ಹಕ್ಕನ್ನು ಒದಗಿಸಲಾಗಿದೆ. ಆ ಮೂಲಕ ಸ್ಥಾಪನೆಯಾದ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಟ ಶೇಕಡ 25ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅವಕಾಶ ಪಡೆಯುತ್ತಾರೆ. ಆದರೆ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ 25% ಕನಿಷ್ಠ ಮೀಸಲಾತಿಯನ್ನು ರದ್ದು ಮಾಡಿದೆ. ಇದರಿಂದ ಆಡಳಿತ ಮಂಡಳಿಗಳು ಕಟ್ಟಾಚಾರಕ್ಕೆ ನಾಲ್ಕಾರು ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಉಳಿದ ಸೀಟುಗಳನ್ನು ತಮ್ಮಿಚ್ಛೆಯಂತೆ ಮಾರಾಟ ಮಾಡಿಕೊಳ್ಳುವ ಅಥವಾ ಇತರರಿಗೆ ನೀಡುವ ಆತಂಕ ಎದುರಾಗಿದೆ. ಇದರಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಅನ್ಯಾಯವಾಗಲಿದೆ ಅಬ್ದುಲ್ ಮಜೀದ್ ಪ್ರಕಟಣೆಯ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಲು ಇಲ್ಲಿಯವರಿಗೆ ನೇಮಿಸಲಾಗಿರುವ ಎಲ್ಲಾ ಆಯೋಗಗಳು ಕೂಡ ಅಲ್ಪಸಂಖ್ಯಾತ ಸಮುದಾಯಗಳು ಶಿಕ್ಷಣದಲ್ಲಿ ಬಹಳಷ್ಟು ಹಿಂದುಳಿದಿವೆ ಎಂದೇ ವರದಿಗಳನ್ನು ನೀಡಿವೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಶಿಕ್ಷಣದಲ್ಲಿ ಹೆಚ್ಚಿನ ಆದ್ಯತೆ ಮತ್ತು ಅವಕಾಶಗಳನ್ನು ನೀಡುವ ಮೂಲಕ ಆ ಸಮುದಾಯಗಳನ್ನು ಮೇಲೆತ್ತಬೇಕಾದ ಅವಶ್ಯಕತೆ ಇದೆ. ಆದರೆ ರಾಜ್ಯ ಸರ್ಕಾರ ಅದಕ್ಕೆ ತದ್ವಿರುದ್ಧವಾದ ನಿರ್ಧಾರವನ್ನು ಕೈಗೊಂಡಿದ್ದು, ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಿದ್ದ ಶೇಕಡ 25ರ ಮೀಸಲಾತಿಯನ್ನು ರದ್ದುಗೊಳಿಸಿದೆ. ಇದು ಶಿಕ್ಷಣ ಸಂಸ್ಥೆಗಳ ಒತ್ತಡದಿಂದ ಆಗಿರುವ ಕ್ರಮ ಎಂದು ಮಜೀದ್ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಈ ಕ್ರಮವನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಹಳೆಯ ಶೇಕಡ 25ರ ಮೀಸಲಾತಿಯನ್ನು ಮುಂದುವರಿಸಬೇಕು. ಜೊತೆಗೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ಪಡೆಯಲು ಮಾಡಿರುವ ನಿಬಂಧನೆಗಳು ಮತ್ತು ಷರತ್ತುಗಳು ಬಹಳ ಕ್ಲಿಷ್ಟಕರವಾಗಿದ್ದು, ಅವುಗಳನ್ನು ಸರಳಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾವನ್ನು ಒತ್ತಾಯಿಸಿದ್ದಾರೆ.