Home ಟಾಪ್ ಸುದ್ದಿಗಳು ಅಗ್ನಿವೀರ್ ರದ್ದು, ಸರಳ ಜಿಎಸ್ಟಿ ಜಾರಿಗೆ: ರಾಹುಲ್ ಗಾಂಧಿ ಭರವಸೆ

ಅಗ್ನಿವೀರ್ ರದ್ದು, ಸರಳ ಜಿಎಸ್ಟಿ ಜಾರಿಗೆ: ರಾಹುಲ್ ಗಾಂಧಿ ಭರವಸೆ

ಬಳ್ಳಾರಿ: ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರ ಜಾರಿಗೆ ತಂದಿರುವಂತ ಅಗ್ನಿವೀರ್ ಯೋಜನೆಯನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಬಳ್ಳಾರಿಯ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ರಾಹುಲ್, ಅಗ್ನಿವೀರ್ ರದ್ದುಗೊಳಿಸುವ ಜೊತೆಗೆ, ಸದ್ಯ ಇರುವ ಜಿಎಸ್ಟಿ ಬದಲಿಗೆ ಸರಳ ಜಿಎಸ್ಟಿ ಯೋಜನೆ ಜಾರಿಗೆ ತರಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಸರಳ ಜಿಎಸ್ಟಿಯಿಂದ ರೈತರು, ಬಡವರು, ಕಾರ್ಮಿಕರಿಗೆ ನೆರವಾಗಲಿದೆ ಎಂದು ರಾಹುಲ್ ಪ್ರತಿಪಾದಿಸಿದ್ದಾರೆ.

ಮೋದಿಯವರು ದೇಶದ 20ಕ್ಕೂ ಹೆಚ್ಚು ಕೋಟ್ಯಾಧೀಶರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಹೊರತು ರೈತರ ಸಾಲ ಮನ್ನಾ ಮಾಡಿಲ್ಲ. ನಮ್ಮ ಕಾಂಗ್ರೆಸ್‌ ಮತ್ತು ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ, ನಿಶ್ಚಿತವಾಗಿ ರೈತರ ಸಾಲ ಮನ್ನಾ ಮಾಡಲಿದೆ. ಬೆಳೆಗಳಿಗೆ ವೈಜ್ಞಾನಿಕ ಕನಿಷ್ಠ ಬೆಂಬಲ ಬೆಲೆಯೂ ನಿಗದಿಪಡಿಸಲಿದೆ ಎಂದರು.

ದೇಶದಲ್ಲಿ ವ್ಯಾಪಿಸಿರುವ ನಿರುದ್ಯೋಗ ಸಮಸ್ಯೆ ಕೊನೆಗಾಣಿಸಲು ಆದ್ಯತೆ ನೀಡಲಾಗುವುದು. ಪದವಿ ಮುಗಿದ ಕೂಡಲೇ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಅಗತ್ಯ ಕೌಶಲ ತರಬೇತಿ ನೀಡುತ್ತೇವೆ. ಯುವಜನರಿಗೆ ಅಗತ್ಯ ಆರ್ಥಿಕ ನೆರವನ್ನು ಒದಗಿಸಿ, ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹಿಸುತ್ತೇವೆ ಎಂದರು.

ಕರ್ನಾಟಕಕ್ಕೆ ಬರಬೇಕಾಗಿದ್ದ 18000 ಕೋಟಿ ಹಣವನ್ನು ಬಿಜೆಪಿ ಅಲ್ಲ, ಭಾರತೀಯ ಚೊಂಬು ಪಾರ್ಟಿ ಕೊಟ್ಟಿಲ್ಲ. ಕರ್ನಾಟಕಕ್ಕೆ 18000 ಕೋಟಿ ಬರ ಪರಿಹಾರ ಕೊಡಬೇಕಾಗಿದೆ. ಆದರೆ ಬಿಜೆಪಿ ಚೊಂಬು ಕೊಟ್ಟಿದೆ ಎಂದು ಕಾಂಗ್ರೆಸ್ ವರಿಷ್ಟ ತಮ್ಮ 20 ನಿಮಿಷದ ಭಾಷಣದಲ್ಲಿ ಹೇಳಿದರು.

ಬಳ್ಳಾರಿ ಜಿಲ್ಲೆಯ ಜನರಿಗೆ ಈ ಹಿಂದೆ ನಾನು ಒಂದು ಭರವೆಸೆ ನೀಡಿದ್ದೆ. ಐದು ಗ್ಯಾರಂಟಿ ಕೊಡುವ ಭರವಸೆ ನೀಡಿದ್ದೆನು. ಅದರಂತೆ ಐದು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

.

Join Whatsapp
Exit mobile version