ಒಟ್ಟಾವಾ: ಕಳೆದ ವಾರ ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ‘ಅನುಮಾನಾಸ್ಪದ’ ಮನೆ ಬೆಂಕಿಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬ ಭಾರತೀಯ ಮೂಲದ ದಂಪತಿ ಮತ್ತು ಅವರ ಮಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾರ್ಚ್ 7ರಂದು ಬ್ರಾಂಪ್ಟನ್‌ನ ಬಿಗ್ ಸ್ಕೈ ವೇ ಮತ್ತು ವ್ಯಾನ್ ಕಿರ್ಕ್ ಡ್ರೈವ್ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವರು ಮೃತರಾಗಿದ್ದಾರೆ ಎಂದು ಪೀಲ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದರು.
ಬೆಂಕಿ ನಂದಿಸಿದ ನಂತರ ಪೊಲೀಸರು ಮನೆಯಲ್ಲಿ ಹುಡುಕಾಟ ನಡೆಸಿದ್ದಾಗ ಮಾನವ ಅವಶೇಷಗಳು ಪತ್ತೆಯಾಗಿತ್ತು. ಆದರೆ ಮೃತಪಟ್ಟವರ ಗುರುತು ಮತ್ತು ಸಂಖ್ಯೆ ಪತ್ತೆಯಾಗಿರಲಿಲ್ಲ.
ಶುಕ್ರವಾರ ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಮೃತಪಟ್ಟವರನ್ನು ಭಾರತೀಯ ಮೂಲದ ರಾಜೀವ್ ವಾರಿಕು (51), ಅವರ ಪತ್ನಿ ಶಿಲ್ಪಾ ಕೋಥಾ (47) ಮತ್ತು ಮಗಳು ಮೆಹಕ್ (16) ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.