Home ಟಾಪ್ ಸುದ್ದಿಗಳು ಬಿಜೆಪಿ ಜತೆ ಮೈತ್ರಿ ವಿಚಾರ: ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಸಾಧ್ಯವೇ ಎಂದ HDK

ಬಿಜೆಪಿ ಜತೆ ಮೈತ್ರಿ ವಿಚಾರ: ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಸಾಧ್ಯವೇ ಎಂದ HDK

ಚನ್ನಪಟ್ಟಣ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಚುನಾವಣೆ ಮೈತ್ರಿ ಇಲ್ಲ ಎಂದು ಪುನರುಚ್ಛರಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬಿಜೆಪಿ ಏನು ಸಾಧನೆ ಮಾಡಿದೆ ಎಂದು ಅವರ ಜತೆ ಕೈಜೋಡಿಸಲಿ? ರಾಜ್ಯಕ್ಕೆ ಬಿಜೆಪಿ ಕೊಟ್ಟ ಕೊಡುಗೆ ಏನು? ಮುಂದಿನ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸುತ್ತೇವೆ. ಕಾಂಗ್ರೆಸ್, ಬಿಜೆಪಿಗಿಂತ ಹೆಚ್ಚಿನ ಸ್ಥಾನ ಪಡೆಯುತ್ತೇವೆ. ಅವರಿಗಿಂತ ಜೆಡಿಎಸ್ ಪಕ್ಷ ಒಂದು ಕೈ ಮೇಲುಗೈ ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಚುನಾವಣೆ ವಾತಾವರಣ ನಿರ್ಮಾಣ ಆಗುತ್ತಿದೆ. ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆ ಹೊಂದಾಣಿಕೆ ಪ್ರಶ್ನೆ ಇಲ್ಲ. ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ಈ ರೀತಿಯ ಸುದ್ದಿ ಹರಡಿಸಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿ ಮಾಡಲು ಈ ಸುದ್ದಿ ಹರಡಿಸುತ್ತಿವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ನಿನ್ನೆ ಕಲಬುರ್ಗಿಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇನೆ. ನಾನು ರೈಟು, ಲೆಫ್ಟು ಇಲ್ಲ. ಸ್ಟ್ರೈಟ್ ಎನ್ನುವುದು ನಮ್ಮ ನಿಲುವು ಎಂದು. ಹೀಗಾಗಿ ಹೊಂದಾಣಿಕೆ ಪ್ರಶ್ನೆ ಇಲ್ಲ. ಹೊಂದಾಣಿಕೆ ಸಲುವಾಗಿ ನಾವು ಯಾರ ಮನೆ ಬಾಗಿಲಿಗೂ ಹೋಗಿಲ್ಲ ಎಂದು ಅವರು ನೇರ ಮಾತುಗಳಲ್ಲಿ ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ತರಾಟೆ: ಮೇಕೆದಾಟು ಪಾದಯಾತ್ರೆ ಮಾಡಿ 1000 ರು. ಹಣದ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರು, ಕೇಂದ್ರ ಜಲ ಸಂಪನ್ಮೂಲ ಸಚಿವರ ಹೇಳಿಕೆ ಬಗ್ಗೆ ಏನು ಹೇಳುತ್ತಾರೆ? ಆ ಪಾದಯಾತ್ರೆಯ ಹಣೆಬರಹ ಎಲ್ಲಿಗೆ ಬಂದಿದೆ ಈಗ ಅನ್ನುವುದು ಎಲ್ಲರಿಗೂ ಗೊತ್ತಾಗಿದೆ ಎಂದು ಅವರು ಹೇಳಿದರು. ಹತ್ತು ದಿನಗಳ ಕಾಲ ಭರ್ಜರಿ ಮೃಷ್ಟಾನ್ನ ಭೋಜನ, ಭೂರಿ ಭೋಜನಾ ತಿಂದು ಪಾದಯಾತ್ರೆ ಮಾಡಿದ್ದೇ ಇವರ ಸಾಧನೆ. ಬಜೆಟ್ ನಲ್ಲಿ ಒಂದು ಸಾವಿರ ಕೋಟಿ ತಗೊಂದು ಏನು ಮಾಡುತಾರೆ? ಈ ಸಾವಿರ ಕೋಟಿಯಲ್ಲಿ ಕೆಲಸ ಮಾಡಲು ಸಾಧ್ಯವೇ? ನಾಳೆ ಬೆಳಗ್ಗೆಯೇ ಮೇಕೆದಾಟು ಯೋಜನೆ ಕೆಲಸ ಆರಂಭವಾಗುತ್ತದಾ? ಎರಡು ರಾಷ್ಟ್ರೀಯ ಪಕ್ಷಗಳು ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿವೆ ಎಂದು ಕುಮಾರಸ್ವಾಮಿ ಅವರು ಹೇಳಿದರು. ಜನರಿಗೆ ಮಕ್ಮಲ್ ಟೋಪಿ ಹಾಕುವುದು ಮತ್ತು ನೀರಾವರಿ ವಿಷಯದಲ್ಲಿ ಮೂರು ನಾಮ ಹಾಕಿರುವ ಕೆಲಸವನ್ನಷ್ಟೇ ಇವರು ಮಾಡಿದ್ದಾರೆ. ವಿಧಾನಸಭಾ ಕಲಾಪದಲ್ಲಿ ಚರ್ಚೆ ಮಾಡುತ್ತೇನೆ. ಇನ್ನೂ 15 ದಿನಗಳ ಕಾಲ ಸಮಯವಿದೆ, ನನಗೆ ತಾಳ್ಮೆ ಇದೆ ಎಂದು ಮಾಜಿ ಮುಖ್ಯಮಂತ್ರಿಗಳು ಮಾರ್ಮಿಕವಾಗಿ ಹೇಳಿದರು. ಮಕ್ಕಳಿಗಾಗಿ ಇಂದು ಬಂದಿದ್ದೇನೆ: ನನ್ನ ಕ್ಷೇತ್ರ ನನಗೆ ಮುಖ್ಯ. ಹಾಗಾಗಿ ವಿಧಾನಸಭಾ ಕಲಾಪ ಇದ್ದರೂ ಮಕ್ಕಳಿಗಾಗಿ ಬಂದಿದ್ದೇನೆ. ಶಾಲೆ ಕಟ್ಟದವನ್ನು ಸಾಂಕೇತಿಕವಾಗಿ ಉದ್ಘಾಟನೆ ಮಾಡಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಯಾರೂ ನಾಟಕ ಮಾಡುವುದು ಬೇಡ. ಕೆಲವರು ಚನ್ನಪಟ್ಟಣದಲ್ಲಿ ಚೆನ್ನಾಗಿ ನಾಟಕ ಆಡುತ್ತಿದ್ದಾರೆ. ಅವರು ಯಾರು ಎನ್ನುವುದು ಜನರಿಗೆ ಗೊತ್ತಿದೆ. ಯಾರಿಂದಲೂ ಚನ್ನಪಟ್ಟಣ ಜನತೆ ದಾರಿ ತಪ್ಪಿಸಲು ಆಗಲ್ಲ ಎಂದು ಕುಮಾರಸ್ವಾಮಿ ಕೆಲವರಿಗೆ ಟಾಂಗ್ ನೀಡಿದರು

ಬ್ರಮ್ಮಣಿಪುರದಲ್ಲಿ ಯಾರೋ ಒಬ್ಬರು ಎಂಜಿನಿಯರ್ ರನ್ನು ಕರೆದುಕೊಂಡು ಹೋಗಿದ್ದರು. ನಾನು ಈಗಾಗಲೇ ಕಾವೇರಿ ನೀರಾವರಿ ನಿಗಮದಿಂದ ಹೊಸದಾಗಿ 53 ಕೋಟಿ ಅನುದಾನ ಸೇರಿದಂತೆ 100 ಕೋಟಿ ವೆಚ್ಚದಲ್ಲಿ ನಿಗಮದ ಕೆಲ ಕಾರ್ಯಕ್ರಮ ಅನುಷ್ಠಾನಕ್ಕೆ ಒತ್ತು ಕೊಟ್ಟಿದ್ದೇನೆ. ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ಜವಾಬ್ದಾರಿ ನಿರ್ವಹಣೆ ಮಾಡಿದ್ದೇನೆ. ಆದರೆ ಇಲ್ಲಿ ಎಂಎಲ್ಸಿ ಬರೀ ಕೆರೆ ವೀಕ್ಷಣೆಗೆ ನಿಂತಿದ್ದಾರೆ. ಚನ್ನಪಟ್ಟಣ ಕ್ಷೇತ್ರದ ಕೆಲಸ ನಾನು ಮಾತ್ರ ಮಾಡುತ್ತಿದ್ದೇನೆ. ಅವರು ಪಾಪ ಸ್ಕೋಪ್ ತೆಗೆದುಕೊಳ್ಳಲು ಹೊರಟಿದ್ದಾರೆ ಎಂದು ಅವರು ಕಿಡಿಕಾರಿದರು. ಎಂಪಿ ಏನು ಕೊಟ್ಟರು? ಈ ಹಿಂದೆ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಹಲವು ಹಳ್ಳಿಗಳಲ್ಲಿ ಅನಾಹುತ ಆಯಿತು. ರೈತರು ಬೆಳೆದ ಬೆಳೆಗಳು ಹಾನಿಗೆ ಒಳಗಾಗಿತ್ತು. ನಾನು ಬರುವ ಸುದ್ದಿ ತಿಳಿದು ಲೋಕಸಭಾ ಸದಸ್ಯರು ಕೂಡ ಬಂದಿದ್ದರು. ಅವರು ಬಂದು ಜನರಿಗೆ ಏನು ಕೊಟ್ಟರು? ಎನ್ನುವುದು ಗೊತ್ತಿಲ್ಲ. ನಾನು ವೈಯಕ್ತಿಕವಾಗಿ ಪರಿಹಾರ ಹಣ ನೀಡಿದ್ದೇ ಅಷ್ಟೇ. ರೈತರ ಸಂಕಷ್ಟಕ್ಕೆ 6 ಲಕ್ಷ ಪರಿಹಾರ ಹಣ ನೆರವು ನೀಡಿದ್ದೆ. ಅವತ್ತು ವಿಧಾನಪರಿಷತ್ ಸದಸ್ಯರು ಎಲ್ಲಿ ಹೋಗಿದ್ದರು? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು. ನಿನ್ನೆಯ ದಿನ ಕಲಬುರಗಿ ಹೋಗಿದ್ದೆ. ಅಪ್ಜಲಪುರದಲ್ಲಿ ಎಷ್ಟು ಜನರು ಸೇರಿದ್ದರು ಎಂಬುದನ್ನು ಜನ ನೋಡಿದ್ದಾರೆ. ಕಾಂಗ್ರೆಸ್ ಪಾದಯಾತ್ರೆಗೆ ಬೇರೆ ಬೇರೆ ಜಿಲ್ಲೆಗಳಿಂದ ಕರೆಸಿ ಜನರನ್ನು ಸೇರಿಸಿದ್ದರು. 300,400 ಬಸ್ ಗಳಲ್ಲಿ ಜಿಲ್ಲೆ ಜಿಲ್ಲೆಯಿಂದ ಜನರನ್ನು ಕರೆತಂದಿದ್ದರು. ಆದರೆ ಕಲಬುರಗಿಗೆ ನಾನು ಹೋದಾಗ ಎಷ್ಟು ಜನ ಸೇರಿದ್ದರು, ಅವರೆಲ್ಲ ಸ್ವಪ್ರೇರಣೆಯಿಂದ ಬಂದಿದ್ದರು ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.

Join Whatsapp
Exit mobile version