ಪೌರತ್ವ ಕಾಯಿದೆಯ ಸೆಕ್ಷನ್ 9 (2)ರ ಅಡಿ ಅರ್ಜಿ ಆಲಿಸದೆ ವ್ಯಕ್ತಿಯ ಗಡಿಪಾರು ಮಾಡಬಹುದೇ? ಪರಿಶೀಲಿಸಲಿರುವ ಸುಪ್ರೀಂ

Prasthutha|

ನವದೆಹಲಿ: ಪೌರತ್ವ ಕಾಯಿದೆಯ ಸೆಕ್ಷನ್ 9 (2)ರ ಅಡಿ ಪೌರತ್ವಕ್ಕೆ ಸಂಬಂಧಿಸಿದಂತೆ ಅರ್ಜಿ ಇತ್ಯರ್ಥಪಡಿಸದೆಯೇ ವ್ಯಕ್ತಿಯನ್ನು ದೇಶದಿಂದ ಗಡಿಪಾರು ಮಾಡಬಹುದೇ ಎಂಬುದನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಲಿದೆ.

- Advertisement -


ಕಾಯಿದೆಯ ಸೆಕ್ಷನ್ 9 (2) ಪ್ರಕಾರ, ಭಾರತದ ಯಾವುದೇ ಪ್ರಜೆ ಯಾವಾಗ ಅಥವಾ ಹೇಗೆ ಬೇರೊಂದು ದೇಶದ ಪೌರತ್ವವನ್ನು ಪಡೆದಿದ್ದಾನೆ ಎಂಬುದರ ಕುರಿತು ಯಾವುದೇ ಪ್ರಶ್ನೆ ಉದ್ಭವಿಸಿದರೆ, ವ್ಯಕ್ತಿಯ ಪೌರತ್ವ ರದ್ದುಗೊಳಿಸುವ ಮೊದಲು ಪ್ರಮುಖ ಸಾಕ್ಷ್ಯದ ಮೂಲಕ ನಿರ್ಧರಿಸಲಾಗುತ್ತದೆ.


ತಮ್ಮನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡದಂತೆ ತಡೆ ಹಿಡಿಯಬೇಕೆಂದು ಗುಜರಾತ್ ನಿವಾಸಿಯೊಬ್ಬರು ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ. ಬಿ. ಪರ್ದಿವಾಲಾ ಅವರಿದ್ದ ಪೀಠ ಗುಜರಾತ್ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯದ ಪ್ರತಿಕ್ರಿಯೆ ಕೇಳಿದೆ. ಅಲ್ಲದೆ ಪ್ರಕರಣದ ಸಂಬಂಧ ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ್ದು ನವೆಂಬರ್ ನಲ್ಲಿ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆಯಿದೆ.

- Advertisement -


ಗುಜರಾತ್ನ ಗೋಧ್ರಾ ನಿವಾಸಿಯಾಗಿರುವ ಅರ್ಜಿದಾರ ಅಕಿಲ್ ಪಿಪ್ಲೋದ್ ವಾಲಾ ಅವರು 1976ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದರು. ಭಾರತೀಯ ಪ್ರಜೆಯನ್ನು ಮದುವೆಯಾಗಲು 1983 ಲ್ಲಿ ಭಾರತಕ್ಕೆ ಮರಳಿದ್ದರು. 1991ರಲ್ಲಿ, ಅವರು ವಾಸ (ರೆಸಿಡೆನ್ಷಿಯಲ್) ಪರವಾನಗಿಯೊಂದಿಗೆ ಶಾಶ್ವತವಾಗಿ ಭಾರತಕ್ಕೆ ಮರಳಿ ಅಂದಿನಿಂದ ಗುಜರಾತ್ನಲ್ಲಿ ವಾಸಿಸುತ್ತಿದ್ದಾರೆ.
ಗಡೀಪಾರು ವಿರೋಧಿಸಿ ಮತ್ತು ಪಾಕಿಸ್ತಾನಕ್ಕೆ ವಾಪಸ್ ತಮ್ಮನ್ನು ಕಳುಹಿಸದಂತೆ ರಕ್ಷಣೆ ಕೋರಿ ಅರ್ಜಿದಾರರು ಪೌರತ್ವ ಕಾಯಿದೆಯ ಸೆಕ್ಷನ್ 5(1)(ಸಿ) ಅಡಿಯಲ್ಲಿ ಭಾರತೀಯ ಪ್ರಜೆ ಎಂದು ಘೋಷಿಸಲು ಸಿವಿಲ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.


ಮನವಿಯನ್ನು 1999ರಲ್ಲಿ, ಭಾಗಶಃ ಅನುಮತಿಸಿ ಗಡಿಪಾರು ಮಾಡದಂತೆ ರಕ್ಷಣೆ ನೀಡಿದ್ದ ಸಿವಿಲ್ ನ್ಯಾಯಾಧೀಶರು ಪೌರತ್ವದ ಬಗ್ಗೆ ತೀರ್ಪು ನೀಡಲು ಇದು ಸೂಕ್ತ ನ್ಯಾಯಾಲಯವಲ್ಲ ಎಂದಿದ್ದರು. ರಾಜ್ಯ ಸರ್ಕಾರವು 4 ವರ್ಷಗಳ ನಂತರ ತೀರ್ಪನ್ನು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿತು. ಜಿಲ್ಲಾ ನ್ಯಾಯಾಲಯ ಸಿವಿಲ್ ನ್ಯಾಯಾಲಯ ನೀಡಿದ್ದ ರಕ್ಷಣೆ ಆದೇಶವನ್ನು ರದ್ದುಗೊಳಿಸಿತು. ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಆಗಸ್ಟ್ನಲ್ಲಿ ಹೈಕೋರ್ಟ್ ಎತ್ತಿಹಿಡಿದಿದ್ದರಿಂದ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು.


ಪ್ರತಿವಾದಿಗಳು ಯಾವುದೇ ಪುರಾವೆಗಳನ್ನು ದಾಖಲೆಯಲ್ಲಿ ಸಲ್ಲಿಸಿಲ್ಲ ಅಥವಾ ತಾನು ಸ್ವಯಂಪ್ರೇರಣೆಯಿಂದ ಬೇರೆ ದೇಶದ ಪೌರತ್ವವನ್ನು ಪಡೆದುಕೊಂಡಿದ್ದೇನೆ ಎಂದು ತೋರಿಸುವ ಯಾವುದೇ ತನಿಖೆ ನಡೆದಿಲ್ಲ. ಅಲ್ಲದೆ ತಾನು ಭಾರತದಲ್ಲೇ ಹುಟ್ಟಿ ಬೆಳೆದು ಪ್ರಾಥಮಿಕ ಶಿಕ್ಷಣ ಪೂರೈಸಿರುವ ಅಂಶವನ್ನು ಪುರಸ್ಕರಿಸಲು ಕೆಳ ನ್ಯಾಯಾಲಯಗಳು ವಿಫಲವಾಗಿವೆ ಎಂದು ಅರ್ಜಿದಾರರು ವಾದಿಸಿದ್ದಾರೆ.


(ಕೃಪೆ: ಬಾರ್ & ಬೆಂಚ್)

Join Whatsapp