ಉಡುಪಿ: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬಾಲಕಿಯರು ಹಿಜಾಬ್ ಧರಿಸಿದ ನೆಪವನ್ನೊಡ್ಡಿ ಹಾಜರಾತಿಯನ್ನು ನೀಡದೆ ತರಗತಿಯ ಒಳ ಪ್ರವೇಶದ ಮೇಲೆ ನಿರ್ಬಂಧ ಹೇರಲಾಗಿದ್ದು, ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದ ಕಾಲೇಜು ಪ್ರಾಂಶುಪಾಲರ ವಿರುಧ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾದ ಅಸೀಲ್ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು ಸತತವಾಗಿ ಮೂರು ಬಾರಿ ಪೋಷಕರು ಹಾಗೂ ವಿದ್ಯಾರ್ಥಿ ನಾಯಕರು ಕಾಲೇಜಿಗೆ ಭೇಟಿ ನೀಡಿ ಹಿಜಾಬ್ ಧರಿಸಲು ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರೂ ಪ್ರಾಂಶುಪಾಲರು ಹಠಮಾರಿ ಧೋರಣೆಯಿಂದ ಅವಕಾಶ ಕಲ್ಪಿಸದೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಡಿಡಿಪಿಯು ಅವರಿಗೆ ಮನವಿ ನೀಡಿದ್ದು, ಕಾಲೇಜಿಗೆ ಭೇಟಿ ನೀಡಿದ ಡಿಡಿಪಿಯು ಪ್ರಾಂಶುಪಾಲರಲ್ಲಿ ಮಾತನಾಡಿ ವಿದ್ಯಾರ್ಥಿಗಳನ್ನು ತರಗತಿಗೆ ಒಳಪ್ರವೇಶಿಸಲು ಅನುಮತಿ ಕೊಟ್ಟ ಬಳಿಕವೂ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಒಳಪ್ರವೇಶಿಸಲು ಬಿಡಲಿಲ್ಲ. ಈ ಎಲ್ಲಾ ವಿಚಾರವನ್ನು ಗಣನೆಗೆ ತೆಗೆದುಕೊಂಡಾಗ ಪ್ರಾಂಶುಪಾಲರು ಯಾರದ್ದೋ ಒತ್ತಡಕ್ಕೆ ಮಣಿಯುತ್ತಿದ್ದಾರೆಯೆಂಬುದು ಸ್ಪಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಾಂಶುಪಾಲರು ವಿದ್ಯಾರ್ಥಿಗಳ ಸಮಸ್ಯೆಯನ್ನು ಪರಿಗಣಿಸದೆ ಈ ರೀತಿಯ ನಿರ್ಬಂಧಗಳನ್ನು ಹೇಳುತ್ತಾ ಹಠಮಾರಿ ಧೋರಣೆ ತೋರುತ್ತಿದ್ದು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿರುವುದರ ವಿರುಧ್ದ ಅಸೀಲ್ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.