ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿ ಪದವಿ ಕಲಿಕಾ ವ್ಯವಸ್ಥೆಯನ್ನು ಜಾರಿಗೊಳಿಸುವ ತೀರ್ಮಾನವನ್ನು ಕೈಗೊಂಡಿದ್ದು, ಇದನ್ನು ತಕ್ಷಣಾ ಹಿಂಪಡೆಯಬೇಕೆಂದು ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲಾ ಸಮಿತಿಯು ಆಗ್ರಹಿಸುತ್ತಿದೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಮಾತನಾಡಿ ಹೊಸ ಶಿಕ್ಷಣ ನೀತಿಯನ್ನು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಚರ್ಚೆ ನಡೆಸದೆ, ತರಾತುರಿಯಲ್ಲಿ ಹಿಂಬಾಗಿಲಿನ ಮೂಲಕ ಜಾರಿಗೊಳಿಸಲು ಸರಕಾರವು ಹೊರಟಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಇದು ಸಂಪೂರ್ಣವಾಗಿ ಕೇಸರೀಕರಣಗೊಳಿಸುವ ಮತ್ತು ಖಾಸಗೀಕರಣಗೊಳಿಸುವ ಹುನ್ನಾರ ವಾಗಿದೆ ಹಾಗೂ ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ 3 ವರ್ಷ ಇರುವ ಪದವಿಯನ್ನು 4 ವರ್ಷಕ್ಕೆ ಏರಿಸಿದ್ದು, ಒಂದು ವರ್ಷ ಪದವಿ ಕಲಿತರೂ ಪ್ರಮಾಣ ಪತ್ರ ನೀಡುವಂತಹ ಈ ನೀತಿಯಿಂದ ಮೌಲ್ಯಯುತ ಶಿಕ್ಷಣಕ್ಕೆ ತೊಂದರೆಯಾಗಲಿದೆ ಮತ್ತು ನಿರುದ್ಯೋಗ ಸಮಸ್ಯೆ ಇನ್ನೂ ಹೆಚ್ಚಾಗಲಿದೆ . ಆದ್ದರಿಂದ ವಿಶ್ವವಿದ್ಯಾನಿಲಯದಲ್ಲಿ ಜಾರಿ ಮಾಡಲು ಹೊರಟಿರುವ ಈ ಅಸಮರ್ಪಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದರು.
ರಾಜ್ಯ ಸಮಿತಿ ಸದಸ್ಯೆ ಮುರ್ಶಿದಾ ಮಂಗಳೂರು , ಜಿಲ್ಲಾ ಮಖಂಡರಾದ ರಿಯಾಝ್ ಅಂಕತ್ತಡ್ಕ, ಅಶ್ಫಿ ಹಾಗೂ ಕ್ಯಾಂಪಸ್ ಫ್ರಂಟ್ ಗ್ರಾಮೀಣ ಅಧ್ಯಕ್ಷರಾದ ಶರ್ಫುದ್ದೀನ್ ಮಾತನಾಡಿದರು. ದ. ಕ ಜಿಲ್ಲಾಧ್ಯಕ್ಷ ಸಿರಾಜ್ ಮಂಗಳೂರು ಉಪಸ್ಥಿತರಿದ್ದರು