ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಎಂಬ ಪ್ರದೇಶದಲ್ಲಿ ನಾಲ್ಕು ವರ್ಷದ ಪುಟ್ಟ ಮಗುವನ್ನು ವಿಘ್ನೇಷ್ ಭಂಡಾರಿ ಎಂಬ ಯುವಕನು ಲೈಂಗಿಕ ಕಿರುಕುಳ ನೀಡಿರುವ ಆರೋಪವನ್ನು ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ತಾಲೂಕು ಸಮಿತಿ ಖಂಡಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಯಾಸಿನ್ ಬಂಗೇರಕಟ್ಟೆ, ಸೋಮವಾರ ಮಧ್ಯಾಹ್ನದ ವೇಳೆ 4 ವರ್ಷದ ಮಗು ತಾಯಿಯಲ್ಲಿ ಬಂದು ತನ್ನ ಮೇಲಾದ ದೌರ್ಜನ್ಯದ ಕುರಿತು ಹೇಳಿಕೊಂಡಿದ್ದಾಳೆ. ಆರೋಪಿ ವಿಘ್ನೇಷ್ ಭಂಡಾರಿ ಮೊಬೈಲಿನಲ್ಲಿ ಅಶ್ಲೀಲ ವೀಡಿಯೋಗಳನ್ನು ತೋರಿಸಿ ಮಗುವಿಗೆ ಕಿರುಕುಳ ನೀಡಿದ್ದಾನೆ. ಈ ಘಟನೆಯಿಂದಾಗಿ ಸಮಾಜವೇ ತಲೆ ತಗ್ಗಿಸುವಂತಾಗಿದೆ. ವಿಘ್ನೇಷ್ ಭಂಡಾರಿಯ ಈ ನೀಚ ಕೃತ್ಯ ಇದೇ ಮೊದಲೇನಲ್ಲ, ಸುಮಾರು ಮೂರು ವರ್ಷಗಳ ಹಿಂದೆಯೂ ಇಂತಹ ಪೈಶಾಚಿಕ ಕೃತ್ಯವನ್ನು ಎಸಗಿದ್ದನು, ಆ ಸಂದರ್ಭದಲ್ಲಿ ಕೇಸು ದಾಖಲಿಸದೆ ಪ್ರಕರಣವನ್ನು ಇತ್ಯರ್ಥಗೊಳಿಸಿದ ಕಾರಣದಿಂದಾಗಿಯೇ ಮತ್ತೊಂದು ದುಷ್ಕೃತ್ಯ ಇಂದು ಬೆಳಕಿಗೆ ಬಂದಿರುವುದು. ಇಂತಹ ಘಟನೆಗಳು ಮುಂದೆ ಮತ್ತೆ ಮರುಕಳಿಸಬಾರದು ಹಾಗೂ ಈ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್ ನಲ್ಲಿ ತನಿಖೆಯನ್ನು ನಡೆಸಿ, ಶೀಘ್ರವಾಗಿ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆರೋಪಿಯನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.