ಬೆಂಗಳೂರು: ಉಡುಪಿ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರ ರಿಟ್ ಅರ್ಜಿ ವಿಚಾರಣಾ ಹಂತದಲ್ಲಿರುವಾಗಲೇ ರಾಜ್ಯ ಸರಕಾರವು ತನ್ನ ಶಾಸಕಾಂಗದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದು ಮಾತ್ರವಲ್ಲದೇ, ನ್ಯಾಯಾಂಗದ ಹಿತಾಸಕ್ತಿಯ ಮೇಲೆ ಪ್ರಭಾವ ಬೀರುವ ಅದರ ಮೊಂಡು ಕ್ರಮದ ಆದೇಶವನ್ನು ಜಾರಿಗೊಳಿಸುವ ಪ್ರಯತ್ನವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಥಾವುಲ್ಲಾ ಪೂಂಜಾಲಕಟ್ಟೆ ತೀವ್ರವಾಗಿ ಖಂಡಿಸಿದ್ದಾರೆ.
ಸರಕಾರವು ಸ್ಕಾರ್ಫ್ ಗೆ ಕಳಂಕ ತರುವ ಸಾಧ್ಯತೆಯಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಸ್ಕಾರ್ಫ್ ಗೆ ಸಂಬಂಧಿಸಿದ ಎರಡು ತೀರ್ಪುಗಳನ್ನು ಉಲ್ಲೇಖಿಸುವ ಮೂಲಕ ಸರಕಾರವು, ಮುಸ್ಲಿಮ್ ಮಹಿಳೆಯರು ತಮ್ಮ ಧಾರ್ಮಿಕ ಆಚರಣೆಯ ಭಾಗವಾಗಿ ಬಳಸುವ ಒಂದು ತುಂಡು ಬಟ್ಟೆಯನ್ನು “ಅಶಾಂತಿಯ ಪ್ರತೀಕ” ಎಂದು ಘೋಷಿಸಿದೆ. ಇವೆರಡು ಪ್ರಕರಣಗಳ ವಾಸ್ತವ ಮತ್ತು ಸನ್ನಿವೇಶಗಳು ಕರ್ನಾಟಕದಲ್ಲಿ ನಡೆಯುತ್ತಿರುವ ಸಮವಸ್ತ್ರ ವಿಚಾರಕ್ಕೆ ಸಂಪೂರ್ಣ ಭಿನ್ನವಾಗಿದೆ. ಈ ಆದೇಶವು ಪ್ರಸಕ್ತ ಬಿಜೆಪಿ ಸರ್ಕಾರದ ಕೋಮುವಾದಿ ಅಥವಾ ವಿಭಜನಕಾರಿ ನೀತಿಯ ಸಾಲಿನಲ್ಲಿ ಬರುತ್ತಿದ್ದು, ಇದರಲ್ಲಿ ಕರ್ನಾಟಕದ ಜನರಿಗೆ ಯಾವುದೇ ಅಚ್ಚರಿ ಇಲ್ಲ ಎಂದು ಅವರು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವು ಕರ್ನಾಟಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಸಮಾನತೆ, ಸ್ವಾತಂತ್ರ್ಯ ಮತ್ತು ಧಾರ್ಮಿಕ ಹಕ್ಕನ್ನು ಪ್ರಜಾಸತ್ತಾತ್ಮಕ ಹಾದಿಯಲ್ಲಿ ಪ್ರತಿಪಾದಿಸಲು ಎಂದಿಗೂ ಬದ್ಧವಾಗಿರುತ್ತದೆ. ಈ ರೀತಿಯ ಕಾನೂನು ಬಾಹಿರ ನಿರ್ಧಾರಗಳು ವಿವಿಧ ಸಮಾಜಗಳ ಸಹಿಷ್ಣುತೆ ಮತ್ತು ಸಹಬಾಳ್ವೆಯಿಂದ ಕಟ್ಟಲಾದ ಹಾಗೂ ಜಗತ್ತಿನಾದ್ಯಂತ ಪ್ರಖ್ಯಾತಗೊಂಡಿರುವ ಈ ಮಹಾನ್ ದೇಶದ ಜಾತ್ಯತೀತ ವರ್ಚಸ್ಸಿಗೆ ಕಳಂಕ ಉಂಟು ಮಾಡುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.