► ನಾಲ್ಕು ದಿನಗಳ ನಂತರ ಪತ್ತೆಯಾದ ಅಧ್ಯಕ್ಷರು
ಸಿದ್ದಾಪುರ: ವಿಧಾನ ಪರಿಷತ್ ಚುನಾವಣಾ ಮತಗಟ್ಟೆಯ ಒಳಗೆ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಪರಸ್ಪರ ತಳ್ಳಾಟ ಮಾತಿನ ಚಕಮಕಿ ನಡೆದ ಘಟನೆ ಸಿದ್ದಾಪುರದಲ್ಲಿ ಸಂಭವಿಸಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿಯ 25 ಮಂದಿ ಸದಸ್ಯರಿಗೆ ಸಿದ್ದಾಪುರ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಮತಗಟ್ಟೆ ತೆರೆಯಲಾಗಿತ್ತು. ಗ್ರಾಮ ಪಂಚಾಯತಿ ಅಧ್ಯಕ್ಷೆ ಸೇರಿದಂತೆ ಬಿಜೆಪಿ ಬೆಂಬಲಿತ 15 ಮಂದಿ ಸದಸ್ಯರು ದೇವಸ್ಥಾನ ಒಂದರಲ್ಲಿ ಪೂಜೆ ಸಲ್ಲಿಸಿ ಒಟ್ಟಾಗಿ ಮತ ಕೇಂದ್ರಕ್ಕೆ ಆಗಮಿಸಿದರು.
ಸದಸ್ಯರ ಜೊತೆಗೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮತದಾನ ಕೆಂದ್ರಕ್ಕೆ ಪ್ರವೇಶಿಸಿದ ಸಂದರ್ಭ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ಸದಸ್ಯರಲ್ಲದವರನ್ನು ಮತದಾನ ಕೇಂದ್ರದಿಂದ ಹೊರಗೆ ಕಳಿಸುವಂತೆ ಪಟ್ಟು ಹಿಡಿದರು. ಅಲ್ಲದೆ ಮತದಾನ ಕೇಂದ್ರಕ್ಕೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ತಡೆಯಬೇಕೆಂದರು. ಈ ಸಂದರ್ಭದಲ್ಲಿ ಮತಕೇಂದ್ರದ ಒಳಗೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪರಸ್ಪರ ಮಾತಿನ ಚಕಮಕಿ ಹಾಗೂ ತಳ್ಳಾಟ ನಡೆಯಿತು. ಬಳಿಕ ಸರ್ಕಲ್ ಇನ್ಸ್‌ಪೆಕ್ಟರ್ ಪಿ.ವಿ ವೆಂಕಟೇಶ್ ಆಗಮಿಸಿ ಸದಸ್ಯರಲ್ಲದವರನ್ನು ಹೊರಗೆ ಕಳಿಸಿದರು.
ಸಾರ್ವಜನಿಕರು ಆಕ್ರೋಶ: ಕಳೆದ ನಾಲ್ಕು ದಿನಗಳಿಂದ ಗ್ರಾಮ ಪಂಚಾಯತಿ ಅಧ್ಯಕ್ಷರು ಸೇರಿದಂತೆ ಸದಸ್ಯರು ನಾಪತ್ತೆಯಾಗಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ರೆಸಾರ್ಟ್ ವಾಸ್ತವ್ಯ ಮುಗಿಸಿ ಮತದಾನಕ್ಕಾಗಿ ಬಂದಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸಾರ್ವಜನಿಕರು ವಿವಿಧ ಕೆಲಸ ಕಾರ್ಯಗಳಿಗಾಗಿ ಪಂಚಾಯತಿಗೆ ಬಂದು ವಾಪಾಸು ಹೋಗಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಗ್ರಾಮ ಪಂಚಾಯತಿ ಆಡಳಿತ ಯಾವುದೇ ಅಭಿವೃದ್ಧಿ ಬಗ್ಗೆ ಗಮನ ಹರಿಸದೆ ರಾಜಕೀಯ ಕಾಲಹರಣ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸಿದರು.
ಮತ ಕೇಂದ್ರದ ಒಳಗೆ ಮೊಬೈಲ್ ಬಳಸಿದ ಸದಸ್ಯರು: ಮತ ಕೇಂದ್ರದ ಒಳಗೆ ಮತದಾರರು ಮೊಬೈಲ್ ಬಳಸುವುದನ್ನು ಚುನಾವಣಾಧಿಕಾರಿ ನಿರ್ಬಂಧಿಸಿದರೂ ಕೆಲವು ಸದಸ್ಯರು ಮೊಬೈಲ್ ಬಳಸಿರುವುದು ಕಂಡುಬಂದಿದೆ.