Home ಟಾಪ್ ಸುದ್ದಿಗಳು ಸಂಜೆ 6 ಗಂಟೆಗೆ ಕೇಂದ್ರ ಸಚಿವ ಸಂಪುಟ ಪುನಾರಚನೆ | ಸದಾನಂದ ಗೌಡರಿಗೆ ಕೊಕ್; ಶೋಭಾ,...

ಸಂಜೆ 6 ಗಂಟೆಗೆ ಕೇಂದ್ರ ಸಚಿವ ಸಂಪುಟ ಪುನಾರಚನೆ | ಸದಾನಂದ ಗೌಡರಿಗೆ ಕೊಕ್; ಶೋಭಾ, ಪ್ರತಾಪ್ ಸಿಂಹ ಗೆ ಸಂಪುಟದಲ್ಲಿ ಸ್ಥಾನ?

ಬೆಂಗಳೂರು: ಕೇಂದ್ರ ಸಂಪುಟ ಬುಧವಾರ ಸಂಜೆ ಪುನಾರಚನೆಯಾಗಲಿದ್ದು ಎಲ್ಲರ ಗಮನ ದೆಹಲಿಯ ಮೇಲೆ ನೆಟ್ಟಿದೆ. ಸಂಜೆ 6 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನೂತನ ಸಚಿವರ ಪ್ರಮಾನವಚನ ಕಾರ್ಯಕ್ರಮ ನಿಗದಿಯಾಗಿದೆ.

ರಾಜ್ಯದ ಹಲವು ಸಂಸದರು ತಮಗೂ ಸಂಪುಟದಲ್ಲಿ ಸ್ಥಾನ ದೊರೆಯಲಿದೆ ಎಂಬ ವಿಶ್ವಾಸದಲ್ಲಿದ್ದರೆ, ಹಾಲಿ ರಸಗೊಬ್ಬರಸಚಿವರಾಗಿರುವ ಸದಾನಂದ ಗೌಡ ಅವರಿಗೆ ಸಂಪುಟದಿಂದ ಬಹುತೇಕ ಕೊಕ್ ನೀಡುವ ಸಾಧ್ಯತೆ ಇದೆ.

ಈಗಾಗಲೇ ಹಿರಿಯ ಸಂಸದರಾದ ರಮೇಶ್ ಜಿಗಜಿಣಗಿ ಹಾಗೂ ನಾರಾಯಣ ಸ್ವಾಮಿ ಅವರಿಗೆ ದೆಹಲಿಯಿಂದ ಕರೆ ಬಂದಿರುವುದಾಗಿ ತಿಳಿದು ಬಂದಿದೆ. ಜೊತೆಗೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಶಿವಮೊಗ್ಗ ಸಂಸದ, ಸಿಎಂ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಹೆಸರು ಕೂಡಾ ಸಂಪುಟಕ್ಕೆ ಸೇರ್ಪಡೆಗೊಳ್ಳಲಿರುವ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡರೂ ಅಚ್ಚರಿಯಿಲ್ಲ ಎನ್ನಲಾಗಿದೆ.

ಕೇಂದ್ರ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ದೊರೆಯುವ ಬಗ್ಗೆ ಇನ್ನೂ ಖಚಿತತೆ ದೊರೆತಿಲ್ಲ, ಹಿರಿಯ ಸಚಿವರೊಬ್ಬರು ಕರೆ ಮಾಡಿ ದೆಹಲಿಗೆ ಬರುವಂತೆ ತಿಳಿಸಿದರು, ಆದರೆ ಪ್ರಧಾನಿ ಕಚೇರಿಯಿಂದ ಇನ್ನೂ ನನಗೆ ಕರೆ ಬಂದಿಲ್ಲ ಎಂದು ಸಂಸದ ರಮೇಶ್ ಜಿಗಜಿಣಗಿ ತಿಳಿಸಿದ್ದಾರೆ.

ಇನ್ನೂ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಅವರಿಗೂ ಹಿರಿಯ ಸಚಿವರು ಕರೆ ಮಾಡಿದ್ದರು ಎಂದು ರಮೇಶ್ ಜಿಗಜಿಣಗಿ ತಿಳಿಸಿದ್ದಾರೆ. ಐದು ಬಾರಿ ಸಂಸದರಾಗಿರುವ ಜಿಗಜಿಣಗಿ ಹಿಂದಿನ ಮೋದಿ ಸರ್ಕಾರದಲ್ಲಿ ನೀರು ಮತ್ತು ನೈರ್ಮಲ್ಯೀಕರಣ ಖಾತೆ ನಿರ್ವಹಿಸಿದ್ದರು. ಅವರ ಅನುಭವ ಮತ್ತು ಜಾತಿ ಸಮೀಕರಣ ದಿಂದಾಗಿ ಮತ್ತೆ ಕೇಂದ್ರ ಸಂಪುಟಕ್ಕೆ ಸೇರುವ ಸಾಧ್ಯತೆಯಿದೆ.

ಇನ್ನೂ ಬೀದರ್ ಸಂಸದ ಹಾಗೂ ಪ್ರಮುಖ ಲಿಂಗಾಯತ ನಾಯಕ ಭಗವಾನ್ ಖೂಬಾ ಅವರ ಹೆಸರು ಕೇಳಿ ಬರುತ್ತಿದೆ. ಖೂಬಾ ಅವರಿಗೆ ಆರ್ ಎಸ್ ಎಸ್ ಮತ್ತು ಬಿಜೆಪಿ ಪ್ರಮುಖ ನಾಯಕರ ಬೆಂಬಲವಿದೆ.

ಯಾರೆಲ್ಲಾ ಸಚಿವರಾಗಲಿದ್ದಾರೆ ಎಂಬುದು ಸಂಜೆಯ ನಂತರವೇ ತಿಳಿಯಲಿದೆ.

Join Whatsapp
Exit mobile version