ಬೆಂಗಳೂರು: ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸುವ ಕುರಿತು ಉಪ ಮುಖ್ಯಮಂತ್ರಿ ಶಿವ ಕುಮಾರ್ ಹೇಳಿಕೆ ನೀಡಿದ್ದು, ಹೆಚ್ಡಿ ಕುಮಾರಸ್ವಾಮಿ ಹೀಗೆ ಮಾಡಲು ಏಳು ಜನ್ಮ ಎತ್ತಿಬಂದರೂ ಉಪ ಮುಖ್ಯಮಂತ್ರಿಗೆ ಸಾಧ್ಯವಿಲ್ಲ ಎಂದು ಹೇಳಿದ ಬೆನ್ನಿಗೇ ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ ತೀರ್ಮಾನ ಕೈಗೊಳ್ಳಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕನಕಪುರವನ್ನು ಬೆಂಗಳೂರಿನೊಂದಿಗೆ ವಿಲೀನಗೊಳಿಸುವಂತೆ ಇಲ್ಲಿಯವರೆಗೆ ಯಾವುದೇ ಸಚಿವರು ಅಥವಾ ಮುಖಂಡರಿಂದ ಕಂದಾಯ ಇಲಾಖೆಗೆ ಮನವಿ ಬಂದಿಲ್ಲ. ಬಂದರೆ ಅದನ್ನು ಸಂಪುಟದ ಮುಂದೆ ಇಡಲಾಗುವುದು ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯ ಸಂದರ್ಭ ನನಗೂ ತಿಳಿದಿಲ್ಲ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿಯೂ ಚರ್ಚೆ ನಡೆಯುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕೂಡ ಹೇಳಿದ್ದಾರೆ.