ನವದೆಹಲಿ: ರಾಜ್ಯದ ರಾಜಕೀಯ ವಿದ್ಯಮಾನಗಳು, ಸ್ಥಿತಿಗತಿಗಳು ಮತ್ತು ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಚರ್ಚೆ ನಡೆಸಲಾಗಿದೆ. ನಿನ್ನೆ ಸುಪ್ರೀಂಕೋರ್ಟ್ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ನೀಡಿರುವ ಆದೇಶ, ಅದರ ಪರಿಣಾಮಗಳೇನು? ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದು ಸೇರಿದಂತೆ ಎಲ್ಲವೂ ಕೂಡ ಚರ್ಚೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಎಲ್ಲವನ್ನೂ ಅವರಿಗೆ ತಿಳಿಸಿದ್ದು, ಸುದೀರ್ಘವಾಗಿ ಕೇಳಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಮಾತನಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. 2-3 ದಿನಗಳ ಬೆಳವಣಿಗೆ ಆಧಾರದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಯಾವುದೇ ಕ್ಷಣದಲ್ಲಿ ಸಂಪುಟ ವಿಸ್ತರಣೆಯಾಗಬಹುದು ಎಂದು ಹೇಳಿದರು.
ಮುಂಬರುವ ರಾಜ್ಯಸಭಾ ಚುನಾವಣೆ ಬಗ್ಗೆಯೂ ಸುದೀರ್ಘ ಚರ್ಚೆ ನಡೆಸಲಾಯಿತು. ಬರುವ ಸ್ಥಳೀಯ ಸಂಸ್ಥೆ ಚುನಾವಣೆ, ರಾಜ್ಯಸಭಾ, ವಿಧಾನಪರಿಷತ್ ಚುನಾವಣೆ, ಸಚಿವ ಸಂಪುಟ ವಿಸ್ತರಣೆ ಎಲ್ಲದರ ಬಗ್ಗೆಯೂ ಇಂದು ಚರ್ಚೆಯಾಗಿದೆ. ಆದರೆ ನಡ್ಡಾ ಜೊತೆ ಚರ್ಚಿಸಿ ಅಂತಿಮವಾಗಿ ಹೇಳುವುದಾಗಿ ತಿಳಿಸಿದ್ದಾರೆ. ನಮ್ಮ ಕಡೆಯಿಂದ ನಾನು ನೀಡಬೇಕಾದ ಎಲ್ಲ ವಿವರಗಳನ್ನು ನೀಡಿದ್ದೇನೆ, ಅವರ ನಿರ್ಧಾರ ಬಾಕಿ ಇದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು, ರಾಜಕೀಯ ಪಕ್ಷವಾಗಿ ಎಲ್ಲಾ ತೀರ್ಮಾನ ಮಾಡಬೇಕಾಗಿದೆ. ಒಟ್ಟಾರೆ ರಾಜಕೀಯ ಸ್ಥಿತಿಗತಿಗಳ ಆಧಾರದ ಮೇಲೆ ನಿರ್ಣಯಗಳು ಆಗಲಿವೆ. ಈ ಹಿನ್ನೆಲೆಯಲ್ಲಿ ಇಂದು ಸ್ಥಿತಿಗತಿ ಏನಿದೆ ಎನ್ನುವುದನ್ನು ವಿವರಿಸಿದ್ದೇನೆ. ಮುಂದಿನ ಒಂದು ವಾರ ಬಹಳ ಮುಖ್ಯವಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ದೊಡ್ಡಪ್ರಮಾಣದಲ್ಲಿ ಇಡೀ ರಾಜ್ಯದ ತುಂಬಾ ಚುನಾವಣೆ ನಡೆಯುವುದರಿಂದ ಅದರ ಪರಿಣಾಮ ಏನು ಎನ್ನುವುದರ ಕುರಿತು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಉತ್ತರಾಖಂಡ್, ಗುಜರಾತ್ ಮಾದರಿ ನಮಗೆ ಅನ್ವಯವಾಗಲ್ಲ, ಆಯಾ ರಾಜ್ಯದ ಸ್ಥಿತಿಗತಿಗಳ ಮೇಲೆ ನಿರ್ಧಾರಗಳು ಆಗಲಿವೆ. ಹಾಗಾಗಿ ನಮ್ಮ ರಾಜ್ಯದ ರಾಜಕೀಯ ಸ್ಥಿತಿಗತಿ, ಆಡಳಿತಾತ್ಮಕ ಸ್ಥಿತಿಗತಿ, ರಾಜಕೀಯ ವಿದ್ಯಮಾನಗಳು ಇತ್ಯಾದಿಗಳ ಆಧಾರದಲ್ಲಿ ಸಂಪುಟ ಸರ್ಜರಿ ಕುರಿತು ನಿರ್ಧಾರವಾಗಲಿದೆ ಎಂದು ಸಿಎಂ ಸ್ಪಷ್ಟಪಡಿಸಿದರು. ನಿನ್ನೆ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಇಂದು ಮಧ್ಯಾಹ್ನ ಚುನಾವಣಾ ಆಯೋಗ ತಮ್ಮ ಕಾನೂನು ಸಲಹೆಗಾರರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಅವರು ಸರ್ಕಾರಕ್ಕೆ ಏನು ತಿಳಿಸುತ್ತಾರೊ ತೀರ್ಮಾನವನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.