ಉಡುಪಿ: ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗ್ಯಾರಂಟಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಉಡುಪಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದ ಸಿಎಎ ಜಾರಿ ಮಾಡಿದೆ. ಇದು ಚುನಾವಣಾ ಗಿಮಿಕ್ ಅಷ್ಟೆ. ಕರ್ನಾಟಕದಲ್ಲಿ ಇದರ ಜಾರಿ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಧರಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದ್ದನ್ನು ಪ್ರಸ್ತಾಪಿಸಿದ ಸಿಎಂ, ಸಂವಿಧಾನ ಬದಲಾವಣೆಯಾದರೆ ಬಡವರು, ಹಿಂದುಳಿದವರು, ರೈತರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಬದುಕಲು ಸಾಧ್ಯವಿಲ್ಲ. ಮತ್ತೆ ಮನುಸ್ಮೃತಿ ಜಾರಿಗೆ ಬರಲಿದೆ. ಜಾತಿ ವ್ಯವಸ್ಥೆ, ಅಸಮಾನತೆ ಅನುಭವಿಸಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಉಳಿಯಬೇಕಾದರೆ ಸಂವಿಧಾನ ಉಳಿಯಲೇಬೇಕು ಎಂದರು.