ಬೆಂಗಳೂರು: ಚುನಾವಣಾ ಬಾಂಡ್ ಪ್ರಕರಣವು ಕೇಂದ್ರ ಸರ್ಕಾರವನ್ನು ತೀವ್ರ ಸ್ವರೂಪದಲ್ಲಿ ಕಾಡುತ್ತಿದೆ ತನ್ನ ರಕ್ಷಣೆಗಾಗಿ ತರಾತುರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿ.ಎ.ಎ) ಕೇಂದ್ರ ಸರಕಾರ ಜಾರಿಗೆ ತಂದಿದೆ. ಸರಕಾರದ ಈ ನಡೆಯು ಜನರ ಗಮನ ಬೇರೆಡೆಗೆ ಸೆಳೆಯುವ ಹುನ್ನಾರವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ರವರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಈಗಿರುವ ಕೇಂದ್ರ ಸರ್ಕಾರಕ್ಕೆ ಈ ದೇಶದ ಜನರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಸಿಎಎ ಜಾರಿಗೆ ತರುವ ಮೂಲಕ ಹೊರದೇಶದವರನ್ನು ನಮ್ಮ ದೇಶದಲ್ಲಿ ತುಂಬಿಸಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿನ, ಜನಸಾಮಾನ್ಯರ ನೈಜ ಸಮಸ್ಯೆಗಳ ಕಡೆ ಗಮನ ಹರಿಸುತ್ತಿಲ್ಲ. ರೈತರ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ಕೃಷಿ ಕಾಯ್ದೆ ಹೇರಿ ಅವರನ್ನೂ ಕಾಡಲಾಗುತ್ತಿದೆ. ರೈತರು ಬೀದಿಗಿಳಿದಿದ್ದಾರೆ. ನಿರುಧ್ಯೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಗ್ರಹಬಳಕೆಯ ಆಹಾರ ವಸ್ತುಗಳ ದರಗಳ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಈ ಪ್ರಮುಖ ಸಮಸ್ಯೆಗಳ ಕಡೆಗೆ ಗಮನ ಹರಿಸುತ್ತಿಲ್ಲ. ಕೇಂದ್ರದ ವೈಫಲ್ಯದ ವಿರುದ್ಧ ಜನ ರೋಸಿ ಹೋಗಿದ್ದಾರೆ, ಜೊತೆಗೆ ಬಿಜೆಪಿ ಚುನಾವಣಾ ಬಾಂಡ್ ಪ್ರಕರಣದಿಂದ ಸಂಕಷ್ಟದಲ್ಲಿದೆ. ಹೀಗಿರುವಾಗ ಚುನಾವಣೆ ಆಸನ್ನವಾಗಿರುವ ಈ ಹೊತ್ತಿಗೆ ಸರಕಾರದ ನಡೆಯು ಬಹಳಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.