Home ಕರಾವಳಿ ಬೈಕಂಪಾಡಿ: ಅಧಿಕಾರಿಗಳಿಂದ ಸ್ಪಂದನೆ, ಟ್ಯಾಂಕರ್ ಮುಷ್ಕರಕ್ಕೆ ತಾತ್ಕಾಲಿಕ ವಿರಾಮ

ಬೈಕಂಪಾಡಿ: ಅಧಿಕಾರಿಗಳಿಂದ ಸ್ಪಂದನೆ, ಟ್ಯಾಂಕರ್ ಮುಷ್ಕರಕ್ಕೆ ತಾತ್ಕಾಲಿಕ ವಿರಾಮ

ಬೈಕಂಪಾಡಿ: ಬೈಕಂಪಾಡಿಯ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ (ಬಿಪಿಸಿಎಲ್) ಪೆಟ್ರೋಲಿಯಂ ಡಿಪೋದಲ್ಲಿ ಟ್ಯಾಂಕರ್ ಚಾಲಕರ ಸಮಸ್ಯೆಗಳಿಗೆ ಬಿಪಿಸಿಎಲ್ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ, ಜೊತೆಗೆ ಈ ಹಿಂದೆ ಇದ್ದಂತೆ ಐದು ಆರು ಸಾವಿರ ಕಿಲೋಮೀಟರ್‍ ಗಳ ಬದಲಾಗಿ ಕೇವಲ 2ಸಾವಿರ ಕಿ.ಮೀ ಗಳಿಗೆ ಸಂಚಾರ ನಿರ್ಬಂಧಿಸುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಎರಡು ದಿನಗಳ ಕಾಲ ನಡೆಯುತ್ತಿದ್ದ ಟ್ಯಾಂಕರ್ ಮುಷ್ಕರಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದೆ.

ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ಟ್ರಾನ್ಸ್ ಪೋರ್ಟ್ ಪದಾಧಾಕಾರಿಗಳು, ಟ್ಯಾಂಕರ್ ಮಾಲಕರು ಸೇರಿ ಬಿಪಿಸಿಎಲ್ ಅಧಿಕಾರಿಗಳ ಜತೆ ಸುಧಿರ್ಘ ಮಾತುಕತೆ ನಡೆಸಿದರು.
ಮಂಗಳವಾರ ಜಿಲ್ಲಾಧಿಕಾರಿಯ ಪ್ರತಿನಿಧಿಯಾಗಿ ಬಂದಿರುವ ಅಧಿಕಾರಿ ಗೋಕುಲ್‍ದಾಸ್ ನಾಯಕ್ ಅವರು ಮಾತುಕತೆ ನಡೆಸಿ, ಟ್ಯಾಂಕರ್ ಚಾಲಕರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಪ್ರಯತ್ನವಾಗಿದೆ. ತೈಲ ಸಾಗಾಟವನ್ನು ಒಂದು ಟ್ಯಾಂಕರ್‍ ಗೆ ಹಿಂದಿನಂತೆಯೇ ಆರೇಳು ಸಾವಿರ ಕಿ.ಮೀ ನೀಡುವ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಹಿರಿಯ ಅಧಿಕಾರಿಗಳ ತೀರ್ಮಾನವಾಗಬೇಕಿದೆ. ಇದರ ಬಗ್ಗೆ ಬಿಪಿಸಿಎಲ್ ಡಿಪೋ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಮುಂದಿನ ಎರಡು ವಾರದೊಳಗಾಗಿ ಚಾಲಕರ ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ. ತಕ್ಷಣ ಮುಷ್ಕರವನ್ನ ನಿಲ್ಲಿಸಿ ತೈಲ ಸರಬರಾಜಿಗೆ ಟ್ಯಾಂಕರ್ ಚಾಲಕರ ಮುಂದಾಗಬೇಕು ಎಂದು ಮನವಿ ಮಾಡಿದರು.

ಸಮಸ್ಯೆಗಳ ಕುರಿತಾಗಿ ಟ್ಯಾಂಕರ್ ಚಾಲಕರು ಅಭಿಪ್ರಾಯ ವ್ಯಕ್ತಪಡಿಸಿ, ತೈಲ ತುಂಬಿಸಿಕೊಂಡು ಹೋಗುವ ಟ್ಯಾಂಕರ್ ಗೆ ಸೂಕ್ತ ಸಮಯಕ್ಕೆ ಲೋಡಿಂಗ್ ವ್ಯವಸ್ಥೆ ಆಗುತ್ತಿಲ್ಲ ,ಇದರಿಂದ ನಿಗದಿತ ಸಮಯದಲ್ಲಿ ಸಂಚಾರ, ಮನೆ ತಲುಪುವುದು ಕಷ್ಟವಾಗುತ್ತದೆ. ಕೆಲವು ಕಡೆ ಮೂರ್ನಾಲ್ಕು ದಿನಗಳ ಕಾಲ ಅನ್‍ ಲೊಡಿಂಗ್‍ ಗೆ ಕಾಯುವ ಸ್ಥಿತಿಯಿದೆ.
ಹಲವು ಸಂದರ್ಭಗಳಲ್ಲಿ ಟ್ಯಾಂಕರ್ ಗಳನ್ನ ಸಂಸ್ಥೆಯ ನಿಗದಿತ ಅವಧಿಗಿಂತ ಹೆಚ್ಚು ಸಮಯ ಅನಿವಾರ್ಯವಾಗಿ ನಿಲ್ಲಿಸಿದ ಸಂದರ್ಭದಲ್ಲಿ ಜಿಪಿಎಸ್ ಲಾಕ್ ಸಿಸ್ಟಮ್ ತೆರೆವು ಮಾಡಲು ಹೇಳಿದರೆ ಸರಿಯಾದ ಸ್ಪಂದನೆ ಇಲ್ಲಿನ ಡಿಪೋದ ಅಧಿಕಾರಿಗಳು ನೀಡುತ್ತಿಲ್ಲ. ಜತೆಗೆ ಚಾಲಕರ ವಿಶ್ರಾಂತಿ ಕೊಠಡಿಯಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತಿತರ ಸಮಸ್ಯೆಗಳು ಇಲ್ಲಿವೆ ಇದನ್ನು ಕೂಡ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಟ್ಯಾಂಕರ್ ಚಾಲಕರ ಬೇಡಿಕೆಗೆ ಸ್ಪಂದನೆ ನೀಡಿರುವ ಅಧಿಕಾರಿಗಳು ನಿಗದಿತ ಸಮಯದಲ್ಲಿ ಈಡೇರಿಸಲಾಗುವುದು ಎಂದು ಬಿಪಿಸಿಎಲ್ ಭರವಸೆ ನೀಡಿದ ಬಳಿಕ ತೈಲ ಲೋಡಿಂಗ್ ಆರಂಭಿಸಲಾಯಿತು.

ತೈಲ ಸಾಗಾಟ ಟ್ಯಾಂಕರ್ ಮಾಲಕರ ವತಿಯಿಂದ ಸುಜಿತ್ ಆಳ್ವ, ಇಕ್ಬಾಲ್ , ಬಿಪಿಸಿಎಲ್‍ನ ಹಿರಿಯ ಅಧಿಕಾರಿ ನೀರಜ್ ಅಗರ್ವಾಲ್ ,ಇತರ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Join Whatsapp
Exit mobile version