ಬೆಂಗಳೂರು ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶರನ್ನು ಕೊಂದ ಆರೋಪಿಗಳನ್ನು ಜೀವವಿರೋಧಿ ಮನುವಾದಿಗಳು ಸನ್ಮಾನ ಮಾಡಿ ತಾವು ಇಂಥ ನೀಚ ಮನಸ್ಥಿತಿಯವರು ಎಂದು ಜಗತ್ತಿಗೆ ತೋರಿಸಿದ್ದಾರೆ. ಈ ನೀಚತನದ ವಿರುದ್ಧ ಪ್ರತಿಭಟಿಸಿದ ಗೌರಿಯವರ ಕುಟುಂಬ ಸದಸ್ಯರನ್ನು ಮತ್ತು ಪ್ರಗತಿಪರ ಹೋರಾಟಗಾರರನ್ನು ಬಂಧಿಸುವ ಮೂಲಕ ಸರ್ಕಾರವೂ ಸಹ ಆ ಕೊಲೆಗಡುಕ ಆರೋಪಿಗಳಿಗೆ ಪರೋಕ್ಷವಾಗಿ ಸನ್ಮಾನ ಮಾಡಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊಲೆಗಡುಕರಿಗೆ ಬೆಂಬಲಿಸುವ ರೀತಿಯಲ್ಲಿ ಆರೋಪಿಗಳಿಗೆ ಸನ್ಮಾನ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಸಿದ್ದರಾಮಯ್ಯ ಅವರ ಸರ್ಕಾರ ಏನೂ ಮಾಡದೆ ಸುಮ್ಮನಾಗಿತ್ತು. ಆದರೆ ಇಂದು ಆ ಜೀವವಿರೋಧಿ ಕೃತ್ಯದ ವಿರುದ್ಧ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ಗೌರಿ ಲಂಕೇಶ್ ಕುಟುಂಬದವರನ್ನು ಮತ್ತು ಪ್ರಗತಿಪರ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸರ್ಕಾರಕ್ಕೆ ಏನಾಗಿದೆ ಎಂದು ಕಿಡಿ ಕಾರಿದ ಮಜೀದ್ ಅವರು, ಕೋಮುವಾದಿಗಳು ದ್ವೇಷ ಭಾಷಣ ಮಾಡಿದಾಗ, ಹಿಂಸೆಗೆ ಪ್ರಚೋದನೆ ನೀಡಿದಾಗ ಇದೇ ಸರ್ಕಾರಕ್ಕೆ ನೆಪ ಮಾತ್ರಕ್ಕೂ ಕ್ರಮಕ್ಕೆ ಮುಂದಾಗುವುದಿಲ್ಲ. ಇದು ಕಾಂಗ್ರೆಸ್ ಪಕ್ಷದ ಮೃದು ಹಿಂದುತ್ವ ಧೋರಣೆಗೆ ಹಿಡಿದ ಕನ್ನಡಿ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿರುವ ಮಜೀದ್ ಅವರು ಈ ಡೋಂಗಿ ಸರ್ಕಾರ ತನ್ನ ಈ ನಡವಳಿಕೆಗೆ ರಾಜಕೀಯವಾಗಿ ದೊಡ್ಡ ಬೆಲೆ ತೆರಲಿದೆ ಎಂದು ತಮ್ಮ ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.