ವಿಜಯಪುರ: ಆಲಮಟ್ಟಿ ಬಳಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ನುಗ್ಗಲು ಯತ್ನಿಸುತ್ತಿದ್ದ ಬುರ್ಖಾಧಾರಿ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾಸನದ ಕಿಶೋರ್ (22) ಎಂಬಾತ ಬುರ್ಖಾ ಧರಿಸಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಪ್ರವೇಶಕ್ಕೆ ಮುಂದಾಗಿದ್ದಾನೆ. ಈ ವೇಳೆ ಸಂಶಯಗೊಂಡ ಪೊಲೀಸರು ಆತನನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ, ಬುರ್ಖಾ ಧರಿಸಿರುವವ ಮಹಿಳೆಯಲ್ಲ ಪುರುಷ ಎಂಬುದು ಧ್ವನಿಯಿಂದ ಸ್ಪಷ್ಟವಾಗಿದೆ.
ಇದರಿಂದ ಕೂಡಲೇ ಎಚ್ಚೆತ್ತ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕೈಚೀಲದಲ್ಲಿ ಯುವತಿಯರು ಧರಿಸುವ ಬಟ್ಟೆಗಳು, ಲಿಪ್ ಸ್ಟಿಕ್, ನೈಲ್ ಪಾಲಿಶ್ ಇತರೆ ವಸ್ತುಗಳು ಪತ್ತೆಯಾಗಿವೆ. ವಶಕ್ಕೆ ಪಡೆದ ಯುವಕನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ನಾನು ತೃತೀಯ ಲಿಂಗಿಯಾಗಿ ಪರಿವರ್ತನೆ ಹೊಂದುತ್ತಿರುವೆ. ಹೆತ್ತವರು ತನಗೆ ಮದುವೆ ಮಾಡಲು ವಧು ಹುಡುಕುತ್ತಿದ್ದಾರೆ, ನನಗೆ ಮದುವೆ ಬೇಡ ಎಂದರೂ ಒತ್ತಡ ಹೇರುತ್ತಿರುವ ಕಾರಣ ಮನೆ ತೊರೆದು ಬಂದಿರುವುದಾಗಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.
ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.