ಮಡಿಕೇರಿ | ಹಾಡುಹಗಲೇ ವೃದ್ಧ ದಂಪತಿಗಳ ಮನೆಗೆ ನುಗ್ಗಿ ಕಳ್ಳತನ: ಒಂದೇ ವಾರದಲ್ಲಿ ಎರಡು ಪ್ರಕರಣ

Prasthutha|

ಮಡಿಕೇರಿ: ಹಾಡುಹಗಲು ವೃದ್ಧ ದಂಪತಿಗಳ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರಾಭರಣ ಹಾಗೂ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಹೊಸೂರು ಗ್ರಾಮದಲ್ಲಿ ನಡೆದಿದೆ.

- Advertisement -

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದ ಸಮೀಪದ ಹೊಸೂರು ಗ್ರಾಮದ ವೃದ್ಧ ದಂಪತಿಗಳಾದ ಕೂತಂಡ ಸುಬ್ಬಯ್ಯ ಹಾಗೂ ಪುಷ್ಪ ದಂಪತಿಗಳು ಹೊಸೂರು ಗ್ರಾಮದಲ್ಲಿ ವಾಸ ಮಾಡಿಕೊಂಡಿದ್ದಾರೆ. ಭಾನುವಾರದಂದು ಮಧ್ಯಾಹ್ನ ಅಂದಾಜು 1.00 ಗಂಟೆಯ ಸಮಯಕ್ಕೆ ವೃದ್ಧ ದಂಪತಿಗಳು ಕೆಲಸದ ನಿಮಿತ್ತ ಪಾಲಿಬೆಟ್ಟದ ಪಟ್ಟಣಕ್ಕೆ ತೆರಳಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಯಾರೋ ಕಳ್ಳರು ಮನೆಯ ಮುಂಭಾಗದ ಬೀಗ ಮುರಿದು ಮನೆಯ ಒಳಕ್ಕೆ ನುಗ್ಗಿದರು. ನಂತರ ದಂಪತಿಗಳು ಮಲಗುವ ಕೋಣೆಯ ಬೀಗ ತೆಗೆದು ಕೋಣೆಯಲ್ಲಿದ್ದ ಅಲ್ಮಾರದ ಬೀಗ ಮುರಿದು ರೂ 10 ಲಕ್ಷ ಮೌಲ್ಯದ ವಜ್ರಾಭರಣ ಹಾಗೂ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಇದಲ್ಲದೇ ಪೀಚೆಕತ್ತಿ, ಮೊಬೈಲ್ ಅನ್ನು ಕಳ್ಳತನ ಮಾಡಿದ್ದಾರೆಂದು ಸುಬ್ಬಯ್ಯ ರವರು ದೂರು ನೀಡಿದ್ದಾರೆ. ವೃದ್ಧ ದಂಪತಿಗಳು ಬೆಂಗಳೂರಿನಲ್ಲಿ ಈ ಹಿಂದೆ ಉದ್ಯೋಗದಲ್ಲಿದ್ದರು. ಸುಬ್ಬಯ್ಯರವರು ಹೆಚ್.ಎ.ಎಲ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು ದಂಪತಿಗಳು ನಿವೃತ್ತಿ ಹೊಂದಿದ ಬಳಿಕ ಹೊಸೂರು ಗ್ರಾಮದಲ್ಲಿ ವಾಸ ಮಾಡಿಕೊಂಡಿದ್ದರು. ಕೇವಲ ಒಂದು ಗಂಟೆಯ ಸಮಯದೊಳಗೆ ಪಟ್ಟಣಕ್ಕೆ ಹೋಗಿ ಬರುವಷ್ಟರಲ್ಲಿ ಈ ರೀತಿ ಕಳ್ಳತನ ನಡೆದಿದ್ದು, ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ.

ಮಾಲ್ದಾರೆಯಲ್ಲಿ ವೃದ್ಧ ದಂಪತಿಗಳ ಮನೆಗೆ ನುಗ್ಗಿ ದರೋಡೆ ಮಾಡಿದ ಘಟನೆ ಮಾಸುವ ಮುನ್ನ ಇದೀಗ ಪಾಲಿಬೆಟ್ಟದ ಹೊಸೂರು ಗ್ರಾಮದಲ್ಲಿ ಮತ್ತೊಂದು ಘಟನೆ ನಡೆದಿರುವುದರಿಂದ ಸಾರ್ವಜನಿಕರು ಆತಂಕದಲ್ಲಿದ್ದಾರೆ.

- Advertisement -

ಘಟನಾ ಸ್ಥಳಕ್ಕೆ ಸಿ.ಐ ವೆಂಕಟೇಶ್, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

ಒಂದು ವಾರದೊಳಗೆ ವೃದ್ಧ ದಂಪತಿಗಳು ವಾಸ ಮಾಡುತ್ತಿರುವ ಎರಡು ಮನೆಗಳನ್ನು ಟಾರ್ಗೆಟ್ ಮಾಡಿ

ದರೋಡೆ ಹಾಗೂ ಕಳ್ಳತನ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಕಳ್ಳರನ್ನು ಬಂಧಿಸಲು ಪೊಲೀಸರ ಎರಡು ತಂಡಗಳನ್ನು ರಚಿಸಲಾಗಿದೆ.



Join Whatsapp