Home ಟಾಪ್ ಸುದ್ದಿಗಳು ನಡುರಸ್ತೆಯಲ್ಲಿ ನೋಟಿನ ಮಳೆ !

ನಡುರಸ್ತೆಯಲ್ಲಿ ನೋಟಿನ ಮಳೆ !

ಕ್ಯಾಲಿಫೋರ್ನಿಯ: ಸಂಚರಿಸುತ್ತಿದ್ದ ಟ್ರಕ್’ವೊಂದರ ಬಾಗಿಲು ಇದ್ದಕ್ಕಿದ್ದಂತೆ ತೆರೆದುಕೊಂಡ ಕಾರಣ ಹೆದ್ದಾರಿ ಪೂರ್ತಿ ನೋಟುಮಯವಾದ ಘಟನೆ ಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯದಲ್ಲಿ ನಡೆದಿದೆ. ಡಾಲರ್ ನೋಟುಗಳು ಹಾರುತ್ತಾ ನೆಲಕ್ಕೆ ಬೀಳುತ್ತಿರುವುದನ್ನು ಕಂಡ ಜನ, ನಾ ಮುಂದು ತಾ ಮುಂದು ಎಂಬಂತೆ ಕೈಗೆ ಸಿಕ್ಕಷ್ಟು ಡಾಲರ್’ಗಳನ್ನು ಬಾಚಿಕೊಂಡಿದ್ದಾರೆ.

ದಕ್ಷಿಣ ಕ್ಯಾಲಿಫೋರ್ನಿಯದ ಸ್ಯಾನ್ ಡೀಗೋನಿಂದ ಫೆಡರಲ್ ಡೆಪಾಸಿಟ್ ಇನ್ಶೂರನ್ಸ್ ಕಾರ್ಪೋರೇಶನ್ ಕಚೇರಿ ಕಡೆ ಬ್ಯಾಗ್’ಗಳಲ್ಲಿ ಹಣ ತುಂಬಿಕೊಂಡು ಹೋಗುತ್ತಿದ್ದ ಟ್ರಕ್’ನ ಬಾಗಿಲು ಇದ್ದಕ್ಕಿದ್ದಂತೆ ತೆರೆದುಕೊಂಡಿದೆ. ಇದರಿಂದಾಗಿ ಹಣದ ಬ್ಯಾಗ್’ಗಳು ರಸ್ತೆಗೆ ಬಿದ್ದಿತ್ತು. ಬಳಿಕ ಅವುಗಳಲ್ಲಿದ್ದ 1, 20 ಡಾಲರ್ ಮುಖಬೆಲೆಯ ನೋಟುಗಳು ಕಾರ್ಲ್ಸ್’ಡ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿತ್ತು.

‘ಡಾಲರ್ ನೋಟಿನ ಮಳೆ’ಯನ್ನು ನೋಡಿ ಆಶ್ಚರ್ಯಚಕಿತರಾದ ಇತರ ವಾಹನಗಳಲ್ಲಿದ್ದವರು ಕೈಗೆ ಸಿಕ್ಕಷ್ಟು ನೋಟುಗಳನ್ನು ಬಾಚಿಕೊಂಡಿದ್ದಾರೆ. ಡೆಮಿ ಬಾಗ್ಬಿ ಹೆಸರಿನ ಯುವತಿ, ಜನ ರಸ್ತೆಯಲ್ಲಿ ಮುಗಿಬಿದ್ದು ಹಣ ಹೆಕ್ಕಿಕೊಳ್ಳುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ, ‘ಇಂಥ ವಿಲಕ್ಷಣ ದೃಶ್ಯವನ್ನು ನಾನ್ಯಾವತ್ತೂ ನೋಡಿರಲಿಲ್ಲ. ಫ್ರೀವೇ ರಸ್ತೆ ಮೇಲೆ ಹೋಗುತ್ತಿದ್ದವರೆಲ್ಲ ಪುಕ್ಕಟೆಯಾಗಿ ಸಿಗುತ್ತಿದ್ದ ಹಣವನ್ನು ಬಾಚಿಕೊಳ್ಳುತ್ತಿದ್ದಾರೆ” ಅಂತ ವೀಡಿಯೋದಲ್ಲಿ ಹೇಳಿದ್ದಾರೆ.

ರಸ್ತೆಯಲ್ಲಿ ಹಣ ಬಿದ್ದಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಎರಡು ಗಂಟೆಗಳ ಕಾಲ ಫ್ರೀವೇ ರಸ್ತೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸ್ಥಳದಲ್ಲಿ ಹಣ ಬಾಚಿಕೊಳ್ಳುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಡಾಲರ್ ನೋಟುಗಳನ್ನು ಕಿಸೆಗಿಳಿಸಿ ಪರಾರಿಯಾದವರ ಮೇಲೆ ವೀಡಿಯೋಗಳ ಆಧಾರದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಕ್ಯಾಲಿಫೋರ್ನಿಯಾ ಹೈವೇ ಪೆಟ್ರೊಲ್ನ ಸಾರ್ಜೆಂಟ್ ಕರ್ಟಿಸ್ ಮಾರ್ಟಿನ್ ಹೇಳಿದ್ದಾರೆ.

ನಷ್ಟವಾಗಿರುವ ಹಣದ ಲೆಕ್ಕಾಚಾರವನ್ನು ಫೆಡರಲ್ ಡೆಪಾಸಿಟ್ ಇನ್ಶೂರನ್ಸ್ ಕಾರ್ಪೋರೇಶನ್ ಸಂಸ್ಥೆಯ ಅಧಿಕಾರಗಳು ಬಹಿರಂಗಪಡಿಸಿಲ್ಲ. ಆದರೆ ಹಣವನ್ನು ಹಿಂತಿರುಗಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಅಧಿಕಾರಿಗಳ ಮನವಿಯ ಬಳಿಕ ಹಲವಾರು ಮಂದಿ ಹಣವನ್ನು ಹಿಂತಿರುಗಿಸಿದ್ದಾರೆ ಎಂದು ಕರ್ಟಿಸ್ ಮಾರ್ಟಿನ್ ಹೇಳಿದ್ದಾರೆ. CHP ಮತ್ತು FBI ಪ್ರಕರಣದ ತನಿಖೆ ನಡೆಸುತ್ತಿದೆ.

Join Whatsapp
Exit mobile version