Home ಟಾಪ್ ಸುದ್ದಿಗಳು ಚಿತ್ರೀಕರಣದ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು; ಛಾಯಾಗ್ರಾಹಕಿ ಸಾವು, ನಿರ್ದೇಶಕ ಗಂಭೀರ

ಚಿತ್ರೀಕರಣದ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು; ಛಾಯಾಗ್ರಾಹಕಿ ಸಾವು, ನಿರ್ದೇಶಕ ಗಂಭೀರ

ಲಾಸ್ ಏಂಜಲೀಸ್: ಸಿನಿಮಾ ಚಿತ್ರೀಕರಣದ ವೇಳೆ ಹಿರಿಯ ಹಾಲಿವುಡ್ ನಟ ಆಲೆಕ್ ಬಾಲ್ಡ್ ವಿನ್ ಬಳಸುತ್ತಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಛಾಯಾಗ್ರಾಹಕಿ ಮೃತಪಟ್ಟಿದ್ದು, ತೀವ್ರ ಗಾಯಗೊಂಡ ಚಿತ್ರದ ನಿರ್ದೇಶಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ನ್ಯೂ ಮೆಕ್ಸಿಕೊದಲ್ಲಿ ನಡೆಯುತ್ತಿರುವ “ರಸ್ಟ್” ಹೆಸರಿನ ಸಿನಿಮಾ ಚಿತ್ರೀಕರಣದ ಸೆಟ್ ನಲ್ಲಿ ಈ ದುರ್ಘಟನೆ ನಡೆದಿದ್ದು, ಛಾಯಾಗ್ರಾಹಕಿ ಹಲಿನಾ ಹಚಿನ್ಸ್ (42) ಸಾವಿಗೀಡಾದರೆ, ನಿರ್ದೇಶಕ ಜೋಲ್ ಸೌಜಾ (48) ಗಾಯಗೊಂಡಿದ್ದಾರೆ.
ಅಲೆಕ್ ಬಾಲ್ಡ್’ ವಿನ್ ನಿರ್ಮಾಣ ಹಾಗೂ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ರಸ್ಟ್ ಚಿತ್ರದ ಚಿತ್ರೀಕರಣ ಮೆಕ್ಸಿಕೊದ ಸಂತಾ ಫೇಯ ಹೊರವಲಯದಲ್ಲಿ ನಡೆಯುತ್ತಿತ್ತು. ಇದಕ್ಕಾಗಿ ಸಣ್ಣ ಚರ್ಚ್’ನ ಸೆಟ್ ಹಾಕಲಾಗಿತ್ತು.
ಗುಂಡೇಟಿನಿಂದ ಗಾಯಗೊಂಡಿದ್ದ ಹಲಿನಾ’ರನ್ನು ಏರ್’ ಲಿಫ್ಟ್ ಮೂಲಕ ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದಾಗಲೇ ಅವರು ಮೃತಪಟ್ಟಿದ್ದರು.


ನಿರ್ದೇಶಕ ಜೋಲ್ ಸೌಜಾರನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಳಿಕ ಸಿನಿಮಾ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. 2015ರಲ್ಲಿ ಅಮೆರಿಕ ಫಿಲ್ಮ್ ಇನ್ಸ್ಟಿಟ್ಯೂಟ್ ಸಂಸ್ಥೆಯಿಂದ ಪದವಿ ಪಡೆದಿದ್ದ ಹಲಿನಾ, ಹಾಲಿವುಡ್ ನಲ್ಲಿ “ರೈಸಿಂಗ್ ಸ್ಟಾರ್” ಎಂದೇ ಖ್ಯಾತಿ ಪಡೆದಿದ್ದರು.

Join Whatsapp
Exit mobile version