Home ಟಾಪ್ ಸುದ್ದಿಗಳು ಬುಲ್ಡೋಜರ್ ಹೇಳಿಕೆ: ಬಿಜೆಪಿ ಬೆಂಬಲಿಗರಿಂದ ಅಪಪ್ರಚಾರ- ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

ಬುಲ್ಡೋಜರ್ ಹೇಳಿಕೆ: ಬಿಜೆಪಿ ಬೆಂಬಲಿಗರಿಂದ ಅಪಪ್ರಚಾರ- ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

ಬೆಂಗಳೂರು: ಶ್ರೀರಾಮಸೇನೆ, ಬಜರಂಗದಳ, ಆರ್ ಎಸ್ ಎಸ್ ಮೇಲೆ ಬುಲ್ಡೋಜರ್ ನುಗ್ಗಿಸಬೇಕು ಎಂದು ನಾನು ಕರೆಕೊಟ್ಟಿದ್ದೇನೆ ಎಂಬ ಅರ್ಥದಲ್ಲಿ ಪ್ರಕಟವಾಗಿದ್ದ ಪತ್ರಿಕಾ ವರದಿಯನ್ನು ಬಹಳಷ್ಟು ಬಿಜೆಪಿ ಬೆಂಬಲಿಗರು ಹಂಚಿಕೊಂಡು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. 

ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ಅವರು, “ವಿರೋಧ ಪಕ್ಷದವರು, ಅಲ್ಪಸಂಖ್ಯಾತರು, ಸೈದ್ದಾಂತಿಕ ವಿರೋಧಿಗಳ ಮನೆಮೇಲೆ ಬುಲ್ ಡೋಜರ್ ಹರಿಸುತ್ತೇವೆ ಎಂಬ ಹಿಂಸಾತ್ಮಕ ಹೇಳಿಕೆಗಳೇ ತಪ್ಪು, ಇಂತಹ ಹೇಳಿಕೆಗಳಿಂದ ಪ್ರಚೋದನೆಗೀಡಾಗಿ ಇನ್ನೊಂದು ಗುಂಪಿನವರು ಶ್ರೀರಾಮಸೇನೆ, ಬಜರಂಗದಳದವರ ಮನೆ ಮೇಲೆ ಬುಲ್ಡೋಜರ್ ಹರಿಸುತ್ತೇವೆ ಎಂದು ಹೇಳುತ್ತಾರೆ. ಇದಕ್ಕೆ ಯಾರೂ ಅವಕಾಶ ನೀಡಬಾರದು” ಎಂದಷ್ಟೇ ನಾನು ಹೇಳಿದ್ದು.

ಇದನ್ನು ತಿರುಚಿ ಪ್ರಕಟವಾದ ವರದಿಯನ್ನು ಇನ್ನಷ್ಟು ತಿರುಚಿ ಕೆಲವು ಸಮಾಜವಿರೋಧಿ ಶಕ್ತಿಗಳು ನನ್ನ ವಿರುದ್ದ ಅಪಪ್ರಚಾರ ನಡೆಸುತ್ತಿವೆ. ಈ ಪ್ರಚೋದನಕಾರಿ ಮತ್ತು ಕಾನೂನು ಬಾಹಿರ ನಡೆ-ನುಡಿಗಳನ್ನು ನಿಲ್ಲಿಸದೆ ಹೋದರೆ ಅಂತಹವರ ವಿರುದ್ದ ಕಾನೂನುಕ್ರಮಕ್ಕಾಗಿ  ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇನೆ ಎಂದು ಅವರು ಎಚ್ಚರಿಸಿದ್ದಾರೆ.

Join Whatsapp
Exit mobile version