► ಸಂಪುಟ ಪುನರ್ ರಚನೆಗೆ ಕಸರತ್ತು ?
ಬೆಂಗಳೂರು, ಜು 16: ರಾಜ್ಯ ಸಚಿವ ಸಂಪುಟ ಪುನರ್ ರಚನೆ ಸೇರಿದಂತೆ ಹಲವು ವಿಷಯಗಳ ಕುರಿತು ವರಿಷ್ಠರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದಿಲ್ಲಿಯಾತ್ರೆ ಕೈಗೊಂಡಿದ್ದಾರೆ. ಸದ್ಯಕ್ಕೆ ನಾಯಕತ್ವ ಬದಲಾವಣೆಗೆ ತೆರೆ ಬಿದ್ದಿದ್ದು, ಸಂಪುಟ ಪುನರ್ ರಚನೆ ಕುರಿತಂತೆ ಚರ್ಚಿಸಲು ಯಡಿಯೂರಪ್ಪ ವಿಶೇಷ ವಿಮಾನದಲ್ಲಿ ತಮ್ಮ ಪುತ್ರ ಬಿ.ವೈ, ವಿಜಯೇಂದ್ರ, ಮುಖ್ಯಮಂತ್ರಿ ಆಪ್ತರಾದ ಲೆಹರ್ ಸಿಂಗ್, ಶಶಿಧರ್ ಸೇರಿ ಎಂಟು ಮಂದಿ ಜತೆ ದೆಹಲಿಗೆ ತೆರಳಿದ್ದಾರೆ.
ಮಂತ್ರಿ ಮಂಡಲದಲ್ಲಿ ಕೆಲವರನ್ನು ಕೈಬಿಟ್ಟು ಸಂಪುಟ ಪುನರ್ ರಚನೆ ಮಾಡುವ ಕುರಿತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತಿತರರನ್ನು ಭೇಟಿ ಮಾಡಿ ರಾಜಕೀಯ ತೀರ್ಮಾನಗಳನ್ನು ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ನೀರಾವರಿ ಸೇರಿದಂತೆ ರಾಜ್ಯದ ಮಹತ್ವದ ಯೋಜನೆಗಳ ಬಗ್ಗೆ ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಮುಖ್ಯಮಂತ್ರಿಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳೂ ದೆಹಲಿಗೆ ತೆರಳಿದ್ದಾರೆ. ಮಧ್ಯಾಹ್ನ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ ಅವರು, ಪ್ರಯಾಣಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ನೀರಾವರಿ ಇನ್ನಿತರ ಯೋಜನೆಗಳ ಬಗ್ಗೆ ದೆಹಲಿ ಪ್ರವಾಸದ ವೇಳೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕೂಡ ಭೇಟಿ ಮಾಡಿ ರಾಜ್ಯದ ಯೋಜನೆಗಳ ಕುರಿತಂತೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.