ಹುಬ್ಬಳ್ಳಿ: ಬಿಜೆಪಿ ನಾಯಕ, ಮಾಜಿ ಮುಖ್ಯಮತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿವೃತ್ತಿ ಘೋಷಿಸಬಾರದು. ಅವರ ನಾಯಕತ್ವದಲ್ಲೇ ಪಕ್ಷ ಹೆಚ್ಚು ಸೀಟುಗಳನ್ನು ಗೆದ್ದಿತ್ತೇ ವಿನಾ ಮತ್ತೊಬ್ಬರ ಹೆಸರಿನಿಂದಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಅವರ ಹೆಸರಲ್ಲೇ ಆಪರೇಷನ್ ಕಮಲ ಮಾಡಿ, ಬಿಜೆಪಿಯವರು ಅಧಿಕಾರ ಹಿಡಿದರು. ಕಡೆಗೆ ಅವರೇ ಕಣ್ಣೀರು ಹಾಕಿಕೊಂಡು ರಾಜಭವನಕ್ಕೆ ಹೋಗಿ, ರಾಜೀನಾಮೆ ಕೊಟ್ಟು ಬರುವಂತೆ ಮಾಡಿದರು ಎಂದು ತಿಳಿಸಿದರು.
ಯಡಿಯೂರಪ್ಪ ಅವರು ಎಷ್ಟೇ ನೊಂದರೂ ತಮ್ಮ ಪಕ್ಷದ ಪರವಾಗಿ ಅಭಿಮಾನದಿಂದಲೇ ಮಾತನಾಡಿಕೊಂಡು ಬಂದಿದ್ದಾರೆ. ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿದ್ದಾರೆ. ಅವರು ಅನುಭವಿಸುತ್ತಿರುವ ನೋವು ಮತ್ತು ಕಿರುಕುಳ ಅವರಿಗೇ ಗೊತ್ತು. ಮಾನಸಿಕವಾಗಿ ಅವರೀಗ ಕುಗ್ಗಿದ್ದಾರೆ. ಆದರೆ, ಬಿಜೆಪಿ ಮಾತ್ರ ಅವರನ್ನು ಎಷ್ಟು ಬೇಕೋ ಅಷ್ಟು ಬಳಸಿಕೊಂಡು ಬಿಸಾಕಿದೆ ಎಂದರು.