“ಬಿಜೆಪಿ ನಾಯಕರು ನನ್ನನ್ನು ಅಪಹರಿಸಿ, ಕೂಡಿಹಾಕಿದ್ದರು” : ಕ್ರೈಂ ಬ್ರಾಂಚ್ ಮುಂದೆ ನಾಮಪತ್ರ ವಾಪಸ್ ಪಡೆದ ಅಭ್ಯರ್ಥಿ ಹೇಳಿಕೆ

Prasthutha|

ಮಂಜೇಶ್ವರ : ನಾಮಪತ್ರ ಹಿಂಪಡೆಯಲು ಆಮಿಷ ಒಡ್ಡಿದ ಪ್ರಕರಣದಲ್ಲಿ ಹಣ ನೀಡುವುದಕ್ಕೂ ಮುನ್ನ ತನ್ನನ್ನು ಬಿಜೆಪಿ ನಾಯಕರು ಬೆದರಿಸಿ, ಅಪಹರಿಸಿ, ಕೂಡಿ ಹಾಕಿದ್ದರು ಎಂದು ಬಿಎಸ್ಪಿ ಅಭ್ಯರ್ಥಿ ಕೆ.ಸುಂದರ ಕ್ರೈಂ ಬ್ರಾಂಚ್ ಮುಂದೆ ಹೇಳಿಕೆ ನೀಡಿದ್ದಾರೆ.

ಶೇಣಿಯಲ್ಲಿರುವ ಸುಂದರ ಅವರ ಸಂಬಂಧಿಕರ ಮನೆಯಲ್ಲಿ ಈ ಹೇಳಿಕೆಯನ್ನು ತೆಗೆದುಕೊಳ್ಳಲಾಗಿದ್ದು, ಜಿಲ್ಲಾ ಕ್ರೈಂ ಬ್ರಾಂಚ್ ಡಿ.ವೈ.ಎಸ್.ಪಿ. ಸತೀಶ್ ಕುಮಾರ್ ನೇತೃತ್ವದ ತನಿಖಾ ತಂಡಕ್ಕೆ ಸುಂದರ ಅವರು ಈ ಹೇಳಿಕೆ ನೀಡಿದ್ದಾರೆ. ಪ್ರಕರಣದಲ್ಲಿ ದೂರುದಾರ, LDF ಅಭ್ಯರ್ಥಿ ವಿ.ವಿ. ರಮೇಶನ್ ಅವರ ಹೇಳಿಕೆಯನ್ನು ತನಿಖಾ ತಂಡವು ನಿನ್ನೆ ದಾಖಲಿಸಿತ್ತು. ಮಂಜೇಶ್ವರದಲ್ಲಿ ನಾಮಪತ್ರ ಹಿಂಪಡೆಯಲು ಬಿ.ಎಸ್.ಪಿ. ಅಭ್ಯರ್ಥಿ ಕೆ. ಸುಂದರರಿಗೆ ಹಣ ನೀಡಿರುವುದಾಗಿ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ವಿರುದ್ಧ ವಿ.ವಿ. ರಮೇಶನ್ ದೂರು ನೀಡಿದ್ದರು.

- Advertisement -

ಬಿಜೆಪಿ ನಾಯಕರು ಮನೆಗೆ ಬಂದು 2.5 ಲಕ್ಷ ರೂ. ಮತ್ತು ಸ್ಮಾರ್ಟ್ ಫೋನ್ ನೀಡಿದ್ದಾರೆ ಎಂಬ ಸುಂದರ ಅವರ ಹೇಳಿಕೆ ಭಾರೀ ಊಹಾಪೋಹಗಳಿಗೆ ಕಾರಣವಾಗಿತ್ತು. ಬದಿಯಡ್ಕ ಪೊಲೀಸರು ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದರಾದರೂ ನಂತರ ಕ್ರೈಂ ಬ್ರಾಂಚ್ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು.  

- Advertisement -