ಬಿಎಸ್ಎನ್ಎಲ್ ನೆಟ್ ವರ್ಕ್ ಸಮಸ್ಯೆ | ಪ್ರತಿಭಟಿಸಿದ ವಿದ್ಯಾರ್ಥಿಗಳು

Prasthutha|

ಪಣಜಿ: ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆಯಿಂದಾಗಿ ಆನ್ಲೈನ್ ತರಗತಿಗಳಿಗೆ ತೊಂದರೆಯಾಗುತ್ತಿದೆ ಎಂದು ಗೋವಾದ ಸತ್ತಾರಿ ತಾಲೂಕಿನ ಕೋಡಲ್, ಸಂಟ್ರೆ ಮತ್ತು ದಿರೊಡೆ ಗ್ರಾಮದ ವಿದ್ಯಾರ್ಥಿಗಳು ವಾಲ್ ಪೋಯಿ ಎಂಬಲ್ಲಿ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳ ಪ್ರತಿಭಟನೆಗೆ ಸಾಮಾಜಿಕ ತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಆನ್ಲೈನ್ ತರಗತಿಗಳಿಗೆ ಬಿಎಸ್ಎನ್ಎಲ್ ನೆಟ್ವರ್ಕ್ನಿಂದ ತೊಡಕು ಉಂಟಾಗುತ್ತಿರುವ ಬಗ್ಗೆ ಪಂಚಾಯಿತಿಗೆ ಪತ್ರ ಬರೆದಿದ್ದೆವು. ಕೊನೆಗೆ ಪತ್ರವನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ರವಾನಿಸಲಾಗಿತ್ತು. ಆದರೆ ಇದುವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಸೋಮನಾಥ್ ಗವಾಸ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾನೆ.

- Advertisement -

ಸರ್ಕಾರ ಬಿಎಸ್ಎನ್ಎಲ್ ನೆಟ್ ವರ್ಕ್ ಸಮಸ್ಯೆಯನ್ನು ಬಗೆಹರಿಸದಿದ್ದರೆ ಪುನಃ ಕಚೇರಿಗೆ ಮುತ್ತಿಗೆ ಹಾಕುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಸಂಕಷ್ಟದಿಂದಾಗಿ ಶಾಲಾ, ಕಾಲೇಜುಗಳು ಮುಚ್ಚಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಕುಂಟಾಗದಿರಲಿ ಎಂಬ ಆಶಯದಲ್ಲಿ ಆನ್ಲೈನ್ ತರಗತಿಗಳನ್ನು ಆರಂಭಿಸಲಾಗಿದೆ. ಆದರೆ ಸರ್ಕಾರದ ಸುಪರ್ದಿಯಲ್ಲೇ ಇರುವ ಬಿಎಸ್ಎನ್ಎಲ್ ನೆಟ್ವರ್ಕ್ ಮಾತ್ರ ವಿದ್ಯಾರ್ಥಿಗಳಿಗೆ ದಿನಾಲೂ ನರಕ ಯಾತನೆ ನೀಡುತ್ತಿದೆ.


ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಇಲ್ಲದಿದ್ದರೆ ಬಿಎಸ್ಎನ್ಎಲ್ ನೆಟ್ವರ್ಕ್ ಸೇವೆ ಸ್ಥಗಿತಗೊಂಡಿರುತ್ತದೆ. ಇದು ಸರ್ವೇಸಾಮಾನ್ಯ ಎಂಬಂತೆ ಆಗಿದೆ. ಬಳಕೆದಾರರು ಬೇಸತ್ತು ಬೇರೆ ನೆಟ್ವರ್ಕ್ಗಳಿಗೆ ಪೋರ್ಟ್ ಆಗುತ್ತಿದ್ದಾರೆ. ಮುಳುಗುವ ದೋಣಿಯಂತಿರುವ ಬಿಎಸ್ಎನ್ಎಲ್ ಬಗ್ಗೆ ಸರ್ಕಾರ ಕಿಂಚಿತ್ತು ಗಮನ ಹರಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

Join Whatsapp