ಬಿಎಸ್ಎಫ್ ಸೀಮಾ ವ್ಯಾಪ್ತಿ ಹೆಚ್ಚಳದಿಂದ ದೇಶ ವಿರೋಧಿ ಶಕ್ತಿಗಳ ನಿಗ್ರಹ, ಗೋ ಕಳ್ಳಸಾಗಣೆ ತಡೆಗೆ ಸಹಕಾರಿ: ಗೃಹ ಸಚಿವಾಲಯ

Prasthutha|

ನವದೆಹಲಿ : ಗಡಿ ಭದ್ರತಾ ಪಡೆ -ಬಿಎಸ್ಎಫ್ ವ್ಯಾಪ್ತಿಯನ್ನು 15 ಕಿಲೋಮೀಟರ್ಗಳಿಂದ 50 ಕಿಲೋಮೀಟರ್ ಗಳಿಗೆ ಇತ್ತೀಚೆಗೆ ಹೆಚ್ಚಿಸಿರುವುದು ಗೋ ಕಳ್ಳಸಾಗಣೆಯಂತಹ ಕುಕೃತ್ಯಗಳ ತಡೆಗೆ ಹಾಗೂ ದೇಶ ವಿರೋಧಿ ಶಕ್ತಿಗಳು ಬಳಸುವ ನವೀನ ತಂತ್ರಜ್ಞಾನದ ವಿರುದ್ಧ ರಕ್ಷಣೆ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

- Advertisement -


ಬಿಜೆಪಿ ಸಂಸದ ವರುಣ್ ಗಾಂಧಿಯವರ ಕೇಳಿರುವ ಪ್ರಶ್ನೆಗೆ ಉತ್ತರವಾಗಿ ಲಿಖಿತ ಹೇಳಿಕೆ ನೀಡುವ ಮೂಲಕ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಸಂಬಂಧ ಪ್ರತಿಕ್ರಿಯಿಸಿದ್ದಾರೆ. ಬಿಎಸ್ಎಫ್ ಕಾಯಿದೆಯ ಸೆಕ್ಷನ್ 139(3)ರ ಅಡಿಯಲ್ಲಿ ಅಗತ್ಯವಿರುವಂತೆ, ಅಧಿಕಾರ ವ್ಯಾಪ್ತಿಯನ್ನು ಕಾರ್ಯರೂಪಕ್ಕೆ ತರುವ ಅಧಿಸೂಚನೆಗಳನ್ನು ಈಗಾಗಲೇ ಲೋಕಸಭೆಯಲ್ಲಿ ಮಂಡಿಸಲಾಗಿದ್ದು ಬಳಿಕ ಅದು ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ ಎಂದು ಸಚಿವರು ಹೇಳಿದರು.


ಕೆಲ ರಾಜ್ಯಗಳಲ್ಲಿ ಬಿಎಸ್ಎಫ್ನ ಸೀಮಾ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಿರುವುದು ಬಿಎಸ್ಎಫ್ ತನ್ನ ಗಡಿ ಭದ್ರತಾ ಕಾರ್ಯವನ್ನು ನಿರ್ವಹಿಸಲು ಹೆಚ್ಚಿನ ಸಾಮರ್ಥ್ಯ ತುಂಬಲಿದೆ. ವಿಶೇಷವಾಗಿ ಗೋಪ್ಯ ದೂರ ನಿಯಂತ್ರಣ ವಾಯು ವಾಹನಗಳಾದ ಡ್ರೋನ್ ಹಾಗೂ ಮಾನವರಹಿತ ವಾಯು ವಾಹನಗಳನ್ನು ಬಳಸಿ ಮಾದಕವಸ್ತು, ಶಸ್ತ್ರಾಸ್ತ್ರ, ಖೋಟಾ ನೋಟುಗಳನ್ನು ಅಕ್ರಮವಾಗಿ ದೇಶದೊಳಗೆ ನುಸುಳಿಸುವ ಹಾಗೂ ಗೂಢಚಾರಿಕೆ ಮಾಡಲು ಮುಂದಾಗುವ ದೇಶ ವಿರೋಧಿ ಶಕ್ತಿಗಳನ್ನು ಹತ್ತಿಕ್ಕಲು ಇದು ಸಹಾಯಕವಾಗಲಿದೆ. ಅಲ್ಲದೆ, ಪಶು ಕಳ್ಳಸಾಗಣೆದಾರರು ಬಿಎಸ್ಎಫ್ ವ್ಯಾಪ್ತಿಯಿಂದ ಹೊರಗೆ ಒಳನಾಡಿನ ಪ್ರದೇಶಗಳಲ್ಲಿ ಆಶ್ರಯಪಡೆದು ಪಶು ಕಳ್ಳಸಾಗಣೆಯಲ್ಲಿ ತೊಡಗುವುದನ್ನು ತಡೆಯಲು ಸಹಾಕವಾಗುತ್ತದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

- Advertisement -


ಬಿಎಸ್ಎಫ್ನ ಸೀಮಾ ಅಧಿಕಾರ ವ್ಯಾಪ್ತಿ ನಿಗದಿಪಡಿಸಲು ಕೇಂದ್ರ ಸರ್ಕಾರಕ್ಕೆ ಅನಿಯಂತ್ರಿತ ಅಧಿಕಾರವನ್ನು ನೀಡುವ 1968 ರ ಗಡಿ ಭದ್ರತಾ ಪಡೆ (BSF) ಕಾಯಿದೆಯ ಸೆಕ್ಷನ್ 139 (1) ಅನ್ನು ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್ನಲ್ಲಿ ಈಗಾಗಲೇ ಅರ್ಜಿ ಸಲ್ಲಿಕೆಯಾಗಿದೆ.

Join Whatsapp