ಬೆಂಗಳೂರು: ಜೆಡಿಎಸ್ ಜೊತೆ ಮೈತ್ರಿಗೆ ಹೈಕಮಾಂಡ್ ಒಲವು ತೋರಿಸಿದ್ದು, ಮೈತ್ರಿ ಮಾಡಿಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಮಾಹಿತಿ ರವಾನಿಸಿದ್ದು, JDS ಜೊತೆಗಿನ ಮೈತ್ರಿ ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದು ಖುದ್ದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು. ಆದ್ರೆ, ಇದೀಗ ಏಕಾಏಕಿ ಇದುವರೆಗೆ ಯಾವುದೇ ಮಾತುಕತೆ ಆಗಿಲ್ಲ ಎಂದು ಯಡಿಯೂರಪ್ಪ ಯುಟರ್ನ್ ಹೊಡೆದಿದ್ದಾರೆ.
ಈ ಬಗ್ಗೆ ಇಂದು(ಸೆಪ್ಟೆಂಬರ್ 10) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ವೈ, ಪ್ರಧಾನಿ ನರೇಂದ್ರ ಮೋದಿ ಬೇರೆ ವಿಷಯದಲ್ಲಿ ಬ್ಯುಸಿಯಾಗಿದ್ದಾರೆ. ಬಹುಶ ನಾಳೆ ಅಥವಾ ನಾಡಿದ್ದು ನಂತರ ಮಾತುಕತೆ ಆಗಬಹುದು. ಇದುವರೆಗೆ ಯಾವುದೇ ಮಾತುಕತೆ ಆಗಿಲ್ಲ, ಕಾದು ನೋಡುತ್ತೇವೆ. ಈ ಹಿಂದೆ ನಾನು ಹೇಳುವಾಗಲೂ ಒಂದು ರೂಪಕ್ಕೆ ಬಂದಿರಲಿಲ್ಲ. ಈಗಲೂ ಅಷ್ಟೇ ಮೈತ್ರಿ ವಿಚಾರ ಯಾವುದೇ ರೂಪಕ್ಕೆ ಬಂದಿಲ್ಲ. ಎಲ್ಲವನ್ನೂ ಪ್ರಧಾನಿ ಮೋದಿ, ಅಮಿತ್ ಶಾ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
JDS ಬಿಜೆಪಿಯ ಬಿ ಟೀಂ ಎನ್ನುವುದು ನಿಜವಾಯ್ತು ಎನ್ನುವ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ನಾನು ಮಾತಾಡಲು ಹೋಗಲ್ಲ. ಅಮಿತ್ ಶಾ ಜೊತೆ ನಾನು ಇನ್ನೂ ಮಾತಾಡಿಲ್ಲ ಎಂದರು.
ಮೊನ್ನೆ ಯಡಿಯೂರಪ್ಪ ಹೇಳಿದ್ದೇನು?
ಸೆಪ್ಟೆಂಬರ್ 08ರಂದು ಬೆಂಗಳೂರಿನಲ್ಲಿ ಈ ಮೈತ್ರಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಯಡಿಯೂರಪ್ಪ, ಜೆಡಿಎಸ್ ಜೊತೆ ಮೈತ್ರಿಗೆ ಹೈಕಮಾಂಡ್ ಒಲವು ತೋರಿಸಿದ್ದು, ಮೈತ್ರಿ ಮಾಡಿಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಮಾಹಿತಿ ರವಾನಿಸಿದ್ದು, JDS ಜೊತೆಗಿನ ಮೈತ್ರಿ ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದ್ದರು. ಇದರೊಂದಿಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಾಗುವುದನ್ನು ಖಚಿತಪಡಿಸಿದ್ದರು. ಆದ್ರೆ, ಇದೀಗ ಬಿಎಸ್ವೈ ಉಲ್ಟಾ ಹೊಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.