ಬೆಳಗಾವಿ: ಚಳಿಗಾಲದ ಅಧಿವೇಶನದ ಸಮಯದಲ್ಲೇ ಕ್ಷುಲ್ಲಕ ಕಾರಣಕ್ಕೆ ಇಬ್ಬರನ್ನು ನಿನ್ನೆ ಮಧ್ಯರಾತ್ರಿ ಚಾಕುವಿನಿಂದ ಇರಿದು ಭೀಕರವಾಗಿ ಜೋಡಿ ಕೊಲೆಗೈದಿದ್ದು ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ.
ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದ ಬಸವರಾಜ್ ಬೆಳಗಾಂವ್ಕರ್ (23), ಗಿರೀಶ್ ನಾಗಣ್ಣವರ(34) ಕೊಲೆಯಾದವರು. ಶಿಂದೊಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಆಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಜಿಲ್ಲಾಸ್ಪತ್ರೆ ಬಳಿ ಕೆಎಸ್’ಆರ್’ಪಿ ತುಕಡಿ ನಿಯೋಜಿಸಲಾಗಿದೆ.
ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ಯುವಕರು ಹೊನಲು ಬೆಳಕಿನ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ತನ್ನ ವಾಹನ ಮೈದಾನಕ್ಕೆ ನುಗ್ಗಿಸಿದ್ದಾನೆ. ಇದಕ್ಕೆ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಚಾಲಕ ಸಿಟ್ಟಾಗಿದ್ದಾನೆ.
ಕೂಡಲೇ ಚಾಕುವನ್ನು ಕೈಗೆತ್ತಿಕೊಂಡು ವಾಹನದಿಂದ ಕೆಳಗಿಳಿದು ಇಬ್ಬರ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ಬಿಗಿ ಪೊಲೀಸ್ ಬಂದೋಬಸ್ಥ್ ವ್ಯವಸ್ಥೆ ಮಾಡಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ನಾರಾಯಣ ಅವರು ಪರಿಶೀಲನೆ ನಡೆಸಿದ್ದು, ಇಬ್ಬರ ಮೃತದೇಹಗಳು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.