ಹಾವೇರಿ: ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ವಿನಾಯಕ ನಗರದಲ್ಲಿ ನಡೆದಿದೆ. ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ್ ಅವರ ದೂರದ ಸಂಬಂಧಿಗಳ ಮಕ್ಕಳು ಎಂದು ತಿಳಿದುಬಂದಿದೆ. ಶುಕ್ರವಾರ ಬೆಳಗ್ಗೆ ತಮ್ಮ ಆತ್ಮಹತ್ಯೆಗೆ ಶರಣಾಗಿ ಪ್ರಾಣ ತ್ಯಜಿಸಿದ್ದರೆ, ಮಧ್ಯಾಹ್ನ 12 ಗಂಟೆಯ ವೇಳೆ ಸೋದರನ ದಾರಿಯನ್ನು ಅಕ್ಕ ಹಿಡಿದಿದ್ದಾಳೆ.
16 ವರ್ಷದ ನಾಗರಾಜ್ ಚಲಾವಾದಿ ಮತ್ತು 18 ವರ್ಷದ ಭ್ಯಾಗ್ಯಶ್ರೀ ಸಾವಿನಲ್ಲಿ ಒಂದಾದ ಅಕ್ಕ ಮತ್ತು ತಮ್ಮ. ಶಾಲೆಗೆ ಆರಂಭವಾಗಿದ್ದರಿಂದ ತರಗತಿಗೆ ತೆರಳುವಂತೆ ಪೋಷಕರು ನಾಗರಾಜ್ ಹೇಳಿದ್ದಾರೆ. ಇದರಿಂದ ಮುನಿಸಿಕೊಂಡ ನಾಗರಾಜ್ ಕೋಣೆಗೆ ತೆರಳಿ ನೇಣು ಬಿಗಿದುಕೊಂಡಿದ್ದಾನೆ. ತಮ್ಮ ನಾಗರಾಜ್ ಸಾವಿನ ಸುದ್ದಿ ಭಾಗ್ಯಶ್ರೀಗೆ ಮಧ್ಯಾಹ್ನ 12 ಗಂಟೆಗೆ ತಿಳಿದಿದೆ. ಸುದ್ದಿ ತಿಳಿಯುತ್ತಿದ್ದಂತೆ ಭಾಗ್ಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಶುಕ್ರವಾರ ಸಂಜೆ ವೇಳೆ ಕುಟುಂಬಸ್ಥರು ಅಂತ್ಯಕ್ರಿಯೆ ನೆರೆವೇರಿಸಿದ್ದಾರೆ. ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.