ಕೋಲ್ಕತ್ತಾ: ಮಾರಿ ಗೋಲ್ಡ್ ಮತ್ತು ಗುಡ್ ಡೇ ನಂತಹ ಬಿಸ್ಕೆಟ್‌ಗಳ ತಯಾರಕ ಕಂಪನಿಯಾದ ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್ ಕೋಲ್ಕತ್ತಾದ ತಾರಾತಲಾದಲ್ಲಿರುವ ತನ್ನ ಉತ್ಪಾದನಾ ಘಟಕವನ್ನು ಮುಚ್ಚಲು ನಿರ್ಧರಿಸಿದೆ.
ಕಾರ್ಖಾನೆಯನ್ನು 1947 ರಲ್ಲಿಯೇ ಸ್ಥಾಪಿಸಲಾಗಿತ್ತು. ಭಾರತದಲ್ಲಿ ಕಂಪನಿಯ ಆರಂಭಿಕ ವರ್ಷಗಳಲ್ಲಿ ಕೊಲ್ಕತ್ತಾದ ಫ್ಯಾಕ್ಟರಿ ಪ್ರಮುಖ ಪಾತ್ರ ಹೊಂದಿದೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ತನ್ನ ಕಾರ್ಖಾನೆಯಲ್ಲಿ ಕೆಲಸಗಾರರಿಗೆ ಕಂಪನಿಯು ನೀಡುವ ಸ್ವಯಂ ನಿವೃತ್ತಿ ಯೋಜನೆಯನ್ನು ಎಲ್ಲಾ ಖಾಯಂ ಕೆಲಸಗಾರರು ಒಪ್ಪಿಕೊಂಡಿದೆ ಎಂದು ಈಗಾಗಲೇ ತಿಳಿಸಿದೆ.
ಬ್ರಿಟಾನಿಯಾ ಇಂಡಸ್ಟ್ರೀಸ್ ಆರ್ಥಿಕ ಕಾರ್ಯಸಾಧ್ಯತೆಯ ಸವಾಲುಗಳನ್ನು ಎದುರಿಸುತ್ತಿರುವ ಕಾರಣ ತಾರಾತಲಾ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ತಾರಾತಲಾ ಕಾರ್ಖಾನೆಯು ಕೋಲ್ಕತ್ತಾ ಪೋರ್ಟ್ ಟ್ರಸ್ಟ್ ನಿಂದ 2048 ರವರೆಗೆ ಗುತ್ತಿಗೆ ಪಡೆದ 11 ಎಕರೆ ಗುತ್ತಿಗೆ ಭೂಮಿಯಲ್ಲಿದೆ. ಕಂಪನಿಯು ಮುಂದಿನ 24 ವರ್ಷಗಳವರೆಗೆ ಗುತ್ತಿಗೆಯನ್ನು ಉಳಿಸಿಕೊಳ್ಳುತ್ತದೆ.
ತಾರಾತಲಾ ಕಾರ್ಖಾನೆ ಮುಚ್ಚುವುದರಿಂದ ಸುಮಾರು 150 ಉದ್ಯೋಗಿಗಳು ತೊಂದರೆಗೊಳಗಾಗಲಿದ್ದಾರೆ. ಈ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಕಂಪನಿಯು ಎಲ್ಲಾ ಖಾಯಂ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್) ಪ್ಯಾಕೇಜ್‌ಗಳನ್ನು ನೀಡಿದೆ. ಕಂಪನಿಯು ಸಲ್ಲಿಸಿದ ಬಿಎಸ್‌ಇ ಫೈಲಿಂಗ್ ಪ್ರಕಾರ ಎಲ್ಲಾ ಖಾಯಂ ಕಾರ್ಮಿಕರು ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ.