Home ಟಾಪ್ ಸುದ್ದಿಗಳು ಚುನಾವಣಾ ಅಖಾಡಕ್ಕಿಳಿದ ಮಹಿಳಾ ಅಧಿಕಾರಿ ಬೃಂದಾ ತೌನೋಜಮ್; ಬೆವರತೊಡಗಿದ ಬಿಜೆಪಿ

ಚುನಾವಣಾ ಅಖಾಡಕ್ಕಿಳಿದ ಮಹಿಳಾ ಅಧಿಕಾರಿ ಬೃಂದಾ ತೌನೋಜಮ್; ಬೆವರತೊಡಗಿದ ಬಿಜೆಪಿ

ಮಣಿಪುರ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಖಡಕ್ ಅಧಿಕಾರಿ ಎಂದೇ ಹೆಸರುಗಳಿಸಿದ್ದ ಮಹಿಳಾ ಪೊಲೀಸ್ ಅಧಿಕಾರಿ ಬೃಂದಾ ತೌನೋಜಮ್ ಇದೀಗ ಜೆಡಿ(ಯು) ಪಕ್ಷದಿಂದ  ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಬಿಜೆಪಿಯ ಹಾಲಿ ಶಾಸಕ ಮತ್ತು ಮಣಿಪುರ ಕಾನೂನು ಸಚಿವ ತೊಕ್ಚೋಮ್ ಸತ್ಯಬ್ರತ ಸಿಂಗ್ ರನ್ನು ಚುನಾವಣಾ ಕಣದಲ್ಲಿ ಎದುರಿಸಲಿದ್ದಾರೆ.

ಮಣಿಪುರ ದಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಿದ್ದ ಮಣಿಪುರದ ಲೇಡಿ ‘ಸೂಪರ್ ಕಾಪ್’ ಬೃಂದಾ ತೌನೋಜಮ್ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ಇಂಫಾಲ್ ಪೂರ್ವದ ಯೈಸ್ಕುಲ್ ಅಸೆಂಬ್ಲಿ ಕ್ಷೇತ್ರದಲ್ಲಿ ಬೃಂದಾ  ವಿರುದ್ಧ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ್ದರು.

ಮಣಿಪುರದಲ್ಲಿ ತಮ್ಮ ದಕ್ಷ ನಿಲುವಿನಿಂದ ‘ಸೂಪರ್ ಕಾಪ್ʼ ಆಗಿ ಜನಪ್ರಿಯಗೊಂಡಿರುವ ಪೊಲೀಸ್ ಅಧಿಕಾರಿ ಬೃಂದಾ ತೌನೋಜಮ್, ಡ್ರಗ್ಸ್ ಮಾಫಿಯಾದ ವಿರುದ್ಧ ಕೈಗೊಂಡ ಕ್ರಮಗಳಿಗಾಗಿ ರಾಜ್ಯದಲ್ಲಿ ಜನಪ್ರಿಯರಾಗಿದ್ದಾರೆ. 43 ವರ್ಷದ ಬೃಂದಾ ತೌನೋಜಮ್ ಅಪಾರ ಯುವ ಅಭಿಮಾನಿಗಳನ್ನು ಹೊಂದಿದ್ದಾರೆ. ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಬೃಂದಾ ಅವರಿಗೆ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಬೃಂದಾ ತೌನೊಜಮ್ ರನ್ನು ಈ ಹಿಂದೆ ಮಣಿಪುರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹೋರಾಟಗಾರ್ತಿ ಇರೋಮ್ ಶರ್ಮಿಳಾಗೆ ಹೋಲಿಸಲಾಗುತ್ತಿದೆ. ಆದರೆ, ಇರೋಮ್ ಶರ್ಮಿಳಾಗಿಂತ ಬೃಂದಾ ಹೆಚ್ಚಿನ ಬೆಂಬಲ ರಾಜಕೀಯ ಹೋರಾಟದಲ್ಲಿ ಗಳಿಸಬಹುದು ಎಂದು ಅಂದಾಜಿಸಲಾಗಿದೆ.

ಮಣಿಪುರದಲ್ಲಿ ಇಂದು ಹಾಗೂ ಮಾರ್ಚ್ 05 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಘೋಷಣೆಯಾಗಲಿದೆ.

Join Whatsapp
Exit mobile version