Home ಕರಾವಳಿ ಪತ್ರಕರ್ತ ಡಾ.ಸಂದೀಪ್ ವಾಗ್ಲೆ ಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ

ಪತ್ರಕರ್ತ ಡಾ.ಸಂದೀಪ್ ವಾಗ್ಲೆ ಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ

ಮಂಗಳೂರು: ಸೌಹಾರ್ದತೆ ಮತ್ತು ಮಾನವೀಯ ಮೌಲ್ಯವನ್ನು ಪ್ರತಿ ಬಿಂಬಿಸುವ ವರದಿಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಪತ್ರಕರ್ತ ಡಾ.ಸಂದೀಪ್ ವಾಗ್ಲೆ ಆಯ್ಕೆಯಾಗಿದ್ದಾರೆ.

ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ 2020, ನವಂಬರ್ 25ರಂದು ಪ್ರಕಟಗೊಂಡ ಸಂದೀಪ್ ವಾಗ್ಲೆ ಅವರ ವರದಿ ‘ಕೋಮು ಸೌಹಾರ್ದತೆಗೆ ಸಾಕ್ಷಿ-ಸೇತುವಾದ ಯಕ್ಷಗಾನ’ ಎಂಬ ವರದಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ರೂ. 5,001 ನಗದು, ಪ್ರಶಸ್ತಿ
ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತವೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿ ಹಿಂದು ಪತ್ರಿಕೆಯ ಮಂಗಳೂರು ಬ್ಯುರೋ ಮುಖ್ಯಸ್ಥರಾದ ರವಿಪ್ರಸಾದ್ ಕಮಿಲ, ಬೆಸೆಂಟ್ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸ್ಮಿತಾ ಶೆಣೈ ಮತ್ತು ಮಂಗಳೂರು ವಿವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಡಾ.ಸೌಮ್ಯ ಕೆ.ಬಿ.ಕಿಕ್ಕೇರಿ ನೇತೃತ್ವದ ಆಯ್ಕೆ ಸಮಿತಿಯು ಈ ಆಯ್ಕೆ ಮಾಡಿದೆ.
ಜುಲೈ 22ರಂದು ಪತ್ರಿಕಾಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಪ್ರಶಸ್ತಿ ಪ್ರದಾನ ಮಾಡಲಿರುವರು.

ಪರಿಚಯ: ಮೂಲತಃ ಉಡುಪಿ ಜಿಲ್ಲೆಯವರಾದ ಸಂದೀಪ್ ವಾಗ್ಲೆ ಕಳೆದ 17 ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕನ್ನಡಪ್ರಭದಲ್ಲಿ ಹಿರಿಯ ವರದಿಗಾರರಾಗಿರುವ ಅವರು ಬಿಎಸ್ಸಿ ಪದವಿ, ಪತ್ರಿಕೋದ್ಯಮದಲ್ಲಿ ಎಂ.ಎ. ಹಾಗೂ ಡಾಕ್ಟರೇಟ್ ಪದವಿಯನ್ನು ಮಂಗಳೂರು ವಿವಿಯಿಂದ ಪಡೆದಿದ್ದಾರೆ. ಈ ಹಿಂದೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿಷ್ಠಿತ ಪ.ಗೋ. ಪ್ರಶಸ್ತಿಗೂ ಅವರು ಭಾಜನರಾಗಿದ್ದರು

Join Whatsapp
Exit mobile version