ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ 8 ಮಂದಿಯ ಬಾಳಿಗೆ ಬೆಳಕು

Prasthutha|

►►ಸಾವಿನಲ್ಲೂ ಸಾರ್ಥಕತೆ ಮೆರೆದ ಚಂದ್ರಶೇಖರ್

- Advertisement -

ಬೆಂಗಳೂರು: ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ಬಿಡದಿಯ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು 8 ಮಂದಿಯ ಬಾಳಿಗೆ ಬೆಳಕಾಗಿದ್ದಾರೆ.

ಬಿಡದಿಯ ಚಂದ್ರಶೇಖರ್​ ಅವರಿಗೆ ಅಪಘಾತವಾಗಿ ತಲೆಯ ಹಿಂಭಾಗಕ್ಕೆ ತೀವ್ರ ಪೆಟ್ಟು ಬಿದ್ದಿತ್ತು. ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

- Advertisement -

ಸತತ 48 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರೂ‌ ಚಂದ್ರಶೇಖರ್​ ಚಿಕಿತ್ಸೆಗೆ ಸ್ಪಂದಿಸದಿದ್ದಾಗ, ವೈದ್ಯರು ಮೆದುಳು‌ ನಿಷ್ಕ್ರೀಯ (ಬ್ರೈನ್​ ಡೆಡ್) ​ಎಂದು ಘೋಷಿಸಿದ್ದರು. ಚಂದ್ರಶೇಖರ್​ ಬದುಕಿ ಬರಲ್ಲ ಎಂಬ ಕಹಿ ಸತ್ಯ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನೋವಿನಲ್ಲೂ ಮಾನವೀಯತೆ ಮೆರೆದ ಕುಟುಂಬ, ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿತು.

ಹೃದಯ, ಎರಡು ಕಣ್ಣು, ಕಿಡ್ನಿ, ಯಕೃತ್​ ಅನ್ನು ದಾನವಾಗಿ ನೀಡಿದ್ದಾರೆ. ಆ ಮೂಲಕ 8 ಮಂದಿಯ ಬದುಕಿಗೆ ಬೆಳಕಾಗಿದ್ದಾರೆ. ಮೃತ ಚಂದ್ರಶೇಖರ್​ ಖಾಸಗಿ ಕಂಪನಿಯಲ್ಲಿ ಫೀಲ್ಡ್​ ಟೆಕ್ನಿಷಿಯನ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಪತ್ನಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು ಚಂದ್ರಶೇಖರ್​ ಅಂತ್ಯಕ್ರಿಯೆ ಬಿಡದಿಯಲ್ಲಿ ನೆರವೇರಿತು. ಸಾವಿನಲ್ಲೂ ಸಾರ್ಥಕತೆ ಮೆರೆದ ಚಂದ್ರಶೇಖರ್​ ಗೆ ನೂರಾರು ಮಂದಿ ಕಣ್ಣೀರ ವಿದಾಯ ಹೇಳಿದರು.



Join Whatsapp